Karnataka Covid-19 Update: ಕರ್ನಾಟಕದಲ್ಲಿ 2,975 ಹೊಸ ಪ್ರಕರಣಗಳು, 21 ಸಾವು

|

Updated on: Mar 30, 2021 | 11:14 PM

ಕರ್ನಾಟಕದಲ್ಲಿ ಮಂಗಳವಾರ (ಮಾರ್ಚ್ 30) ಹೊಸದಾಗಿ 2,975 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 9,92,779ಕ್ಕೆ (9.92 ಲಕ್ಷ) ಏರಿಕೆಯಾಗಿದೆ.

Karnataka Covid-19 Update: ಕರ್ನಾಟಕದಲ್ಲಿ 2,975 ಹೊಸ ಪ್ರಕರಣಗಳು, 21 ಸಾವು
ಕೊರೊನಾ ಸೋಂಕು
Follow us on

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ (ಮಾರ್ಚ್ 30) ಹೊಸದಾಗಿ 2,975 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 9,92,779ಕ್ಕೆ (9.92 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 21 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾಗೆ 12,541 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,54,678 (9.54 ಲಕ್ಷ) ಜನ ಗುಣಮುಖರಾಗಿದ್ದಾರೆ. 25,541 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 1,984 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 4,31,899ಕ್ಕೆ (4.31 ಲಕ್ಷ) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಇಂದು 11 ಜನರ ಬಲಿಯಾಗಿದ್ದಾರೆ. ಈವರೆಗೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,601ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

ಮೈಸೂರು ಜಿಲ್ಲೆಯಲ್ಲಿ ಇಂದು 111 ಜನರಿಗೆ ಕೊರೊನಾ ದೃಢಪಟ್ಟಿದೆ. ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55,668ಕ್ಕೆ ಏರಿಕೆಯಾಗಿದೆ. ಈ ಪೈಕಿ 53,949 ಜನರು ಈವರೆಗೆ ಗುಣಮುಖರಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1,054 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 665 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಇಂದು 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ 6 ಮಹಿಳೆಯರು, 10 ಪುರುಷರು. ಸೋಂಕಿತರಿಗೆ ನೆಲಮಂಗಲದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು 53 ಜನರಿಗೆ ಕೊರೊನಾ ದೃಢಪಟ್ಟಿದೆ. ಮಣಿಪಾಲ MIT ಕ್ಯಾಂಪಸ್​ನಲ್ಲಿಂದು ಹೊಸದಾಗಿ 18 ಜನರಲ್ಲಿ ಸೋಂಕು ಪತ್ತೆಯಾಗಿದೆ. ಎಂಐಟಿ ಕ್ಯಾಂಪಸ್​ನಲ್ಲಿ ಈವರೆಗೆ 971 ಜನರಿಗೆ ಕೊರೊನಾ ಸೋಂಕು ತಗುಲಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,185ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 753 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 191 ಜನರು ಮೃತಪಟ್ಟಿದ್ದಾರೆ.

ದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ: ವಿ.ಕೆ.ಪೌಲ್
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದೆ. ದೇಶದಲ್ಲಿ ಕೆಟ್ಟ ಪರಿಸ್ಥಿತಿಯಿಂದ ಹದಗೆಟ್ಟ ಪರಿಸ್ಥಿತಿಗೆ ನಾವು ಹೋಗುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ. ‘ನಾವು ಸೋಂಕು ನಿಯಂತ್ರಿಸಬಹುದು ಎಂದುಕೊಂಡಾಗಲೇ ಪರಿಸ್ಥಿತಿ ಕೈಮೀರುತ್ತಿದೆ’ ಎಂದು ಕೊರೊನಾ ಲಸಿಕೆ ವಿತರಣೆಗಾಗಿ ರಚಿಸಿರುವ ರಾಷ್ಟ್ರೀಯ ತಜ್ಞರ ಸಮಿತಿಯ ಅಧ್ಯಕ್ಷ ವಿ.ಕೆ.ಪೌಲ್ ವಿಷಾದ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸೋಂಕು ಪ್ರಮಾಣ ಹೆಚ್ಚಾಗಲು ರೂಪಾಂತರಿ ಕೊರೊನಾ ವೈರಾಣುಗಳು ಕಾರಣ ಎಂಬ ವರದಿಗಳನ್ನು ಅವರು ಅಲ್ಲಗಳೆದರು. ರಾಜ್ಯ ಸರ್ಕಾರಗಳು ಸೋಂಕು ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ‘ಕಾನೂನು ಬಳಸಿ, ದಂಡ ಹಾಕಿ. ಜನರು ಮಾಸ್ಕ್ ಧರಿಸಲೇಬೇಕು’ ಎಂದು ಅವರು ಕಟುವಾಗಿ ನುಡಿದರು.

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಇದನ್ನೂ ಓದಿ: ಒಂದೇ ಬೆಡ್​​ನಲ್ಲಿ ಇಬ್ಬರು ಕೊರೊನಾ ರೋಗಿಗಳು; ಕೊವಿಡ್​ ಸೋಂಕಿನ ವಿಪರೀತ ಪ್ರಸರಣದಿಂದ ಈ ಆಸ್ಪತ್ರೆಯಲ್ಲಿ ಸಾಲುತ್ತಿಲ್ಲ ವ್ಯವಸ್ಥೆ

Published On - 11:14 pm, Tue, 30 March 21