ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ (ಏಪ್ರಿಲ್ 21) ಕೊರೊನಾ ಸೋಂಕು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ದಿನದ ಗರಿಷ್ಠ ಮಟ್ಟದ ಏರಿಕೆ ಇದು. ಬುಧವಾರ ಒಂದೇ ದಿನ ರಾಜ್ಯದಲ್ಲಿ 23,558 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಅಂದರೆ ಮಂಗಳವಾರ (ಏಪ್ರಿಲ್ 20) 21,794 ಮಂದಿಯಲ್ಲಿ ಸೋಂಕು ದೃಢಪಟ್ಟು, 149 ಮಂದಿ ಸಾವನ್ನಪ್ಪಿದ್ದರು. ಸೋಂಕಿನ ಸಂಖ್ಯೆಯ ದೃಷ್ಟಿಯಲ್ಲಿ ಮಂಗಳವಾರದ್ದು ಈ ಹಿಂದಿನ ಒಂದು ದಿನದ ಅತಿದೊಡ್ಡ ಏರಿಕೆಯ ದಾಖಲೆ ಎನಿಸಿತ್ತು. ಇದಕ್ಕೂ ಮೊದಲು ಭಾನುವಾರದ ಸೋಂಕಿನ ಸಂಖ್ಯೆ (19,067) ಅತಿಹೆಚ್ಚು ಎನಿಸಿಕೊಂಡಿತ್ತು.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಸತತವಾಗಿ ಹೆಚ್ಚಾಗುತ್ತಲೇ ಇವೆ. ‘ಸರ್ಕಾರ ಶೀಘ್ರ ಕಠಿಣ ಕ್ರಮ ಜರುಗಿಸದಿದ್ದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ’ ಎಂಬ ಜನಾರೋಗ್ಯ ತಜ್ಞ ಡಾ.ಗಿರಿಧರ ಬಾಬು ಸೇರಿದಂತೆ ತಾಂತ್ರಿಕ ಸಲಹಾ ಸಮಿತಿಯ ಹಲವು ತಜ್ಞರ ಆತಂಕ ನಿಜವಾಗುತ್ತಿದೆ.
ಮೇ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಕರಣಗಳು ದಿನಕ್ಕೆ 20 ಸಾವಿರ ಮುಟ್ಟುವ ಸಾಧ್ಯತೆಯಿದೆ. ಶೇ 5ರಷ್ಟು ಮಂದಿಗೆ ವೆಂಟಿಲೇಟರ್ ಸಮಸ್ಯೆ ಎದುರಾಗುತ್ತದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದೇ ದೊಡ್ಡ ಸವಾಲಾಗುತ್ತದೆ. ವೆಂಟಿಲೇಟರ್ ಸಮಸ್ಯೆಯಿಂದ ಜೀವಗಳು ಹೋಗುವ ಸಾಧ್ಯತೆ ಇದೆ ಎಂದು ಡಾ.ಗಿರಿಧರ್ ಬಾಬು ಸೋಮವಾರ ಎಚ್ಚರಿಸಿದ್ದರು. ಅವರ ಲೆಕ್ಕಾಚಾರಗಳು ನಿಜವಾಗುತ್ತಿವೆ. ಮಂಗಳವಾರ ಬೆಂಗಳೂರಿನಲ್ಲಿ 12,088 ಸೋಂಕು ಪ್ರಕರಣ ವರದಿಯಾಗಬಹುದು ಎಂದು ಅವರು ವಿಶ್ಲೇಷಿಸಿದ್ದರು. ವಾಸ್ತವದಲ್ಲಿ ಇದನ್ನೂ ಮೀರಿ ಅಂದರೆ 13,782 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಶನಿವಾರಕ್ಕೆ (ಏಪ್ರಿಲ್ 25) ಸೋಂಕಿನ ಪ್ರಮಾಣ 18 ಸಾವಿರ ದಾಟಲಿದೆ ಎಂದು ಗಿರಿಧರ್ ಬಾಬು ವಿಶ್ಲೇಷಿಸಿದ್ದಾರೆ. ಇದು ನಿಜವಾದರೆ ಆತಂಕದ ವಿಷಯವೇ ಸರಿ.
ಬೆಂಗಳೂರಿನಲ್ಲಿ ಬುಧವಾರ 13,640 ಜನರಲ್ಲಿ ಸೋಂಕು ದೃಢಪಟ್ಟಿದ್ದು, 70 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ಮಂಗಳವಾರ 13,782 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 92 ಮಂದಿ ಸಾವನ್ನಪ್ಪಿದ್ದರು. ಅಂಕಿಅಂಶಗಳನ್ನು ಗಮನಸಿದಾಗ ಮಂಗಳವಾರಕ್ಕೆ ಹೋಲಿಸಿದರೆ ಬುಧವಾರದ ಪರಿಸ್ಥಿತಿ ಬೆಂಗಳೂರಿನ ಮಟ್ಟಿಗೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿದಂತಿದೆ. ಆದರೆ ಬುಧವಾರವೂ ಚಿತಾಗಾರಗಳ ಮುಂದೆ ಶವಗಳನ್ನು ಹೊತ್ತಿದ್ದ ವಾಹನಗಳು ಸಾಲುಸಾಲಾಗಿ ನಿಂತಿದ್ದು ಸಾಮಾನ್ಯ ದೃಶ್ಯವೆನಿಸಿತ್ತು.
#Bengaluru scenario
20th AprProjected Daily Cases : 12088
Daily HDU/ ICU bed requirement: 60425th Apr
Projected Daily Cases : 18028
Daily HDU/ ICU bed requirement: 9011st May
Projected Daily Cases : 29124
Daily HDU/ ICU bed requirement: 13471 of 2
— Dr Giridhara R Babu (@epigiri) April 19, 2021
ತುಮಕೂರಿನಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಬೆಂಗಳೂರಿನ ಸಮೀಪದಲ್ಲಿಯೇ ಇರುವ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ 1000 ದಾಟಿರುವುದು ಆತಂಕ ಮೂಡಿಸಿದೆ. ಬುಧವಾರ ಒಂದೇ ದಿನ ತುಮಕೂರು ಜಿಲ್ಲೆಯಲ್ಲಿ ಒಟ್ಟು 1199 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ, ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಸಾಮಾನ್ಯವಾಗಿ ಒಂದು ಸಾವಿರ ದಾಟುತ್ತಿರಲಿಲ್ಲ. ಆದರೆ ತುಮಕೂರಿನಲ್ಲಿ ಮಾತ್ರ ಮಂಗಳವಾರದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಮಂಗಳವಾರ ತುಮಕೂರು ಜಿಲ್ಲೆಯಲ್ಲಿ 1055 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು, ನಾಲ್ವರು ಮೃತಪಟ್ಟಿದ್ದರು. ತುಮಕೂರಿನಲ್ಲಿ ಈವರೆಗೆ ಪ್ರಸ್ತುತ 5020 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 275 ಮಂದಿ ಮೃತಪಟ್ಟಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿಯೂ ಸೋಂಕಿನ ಸಂಖ್ಯೆ ಸತತ ಏರಿಕೆ ದಾಖಲಿಸುತ್ತಿದೆ. ಬುಧವಾರ ಕಲಬುರಗಿ ಜಿಲ್ಲೆಯಲ್ಲಿ 757 ಮಂದಿಯಲ್ಲಿ ಸೋಂಕು ದೃಢಪಟ್ಟು, 8 ಮಂದಿ ಸಾವನ್ನಪ್ಪಿದ್ದರು. ಮಂಗಳವಾರ 818 ಮಂದಿಯಲ್ಲಿ ಸೋಂಕು ದೃಢಪಟ್ಟು, 7 ಮಂದಿ ಸಾವನ್ನಪ್ಪಿದ್ದರು. ಕಲಬುರಗಿಯಲ್ಲಿ ಒಟ್ಟು 5341 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈವರೆಗೆ 399 ಮಂದಿ ಸಾವನ್ನಪ್ಪಿದ್ದಾರೆ.
ಇಂದಿನ 21/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/TrKPapdAsx@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @RCBTweets @NammaKarnataka_ pic.twitter.com/4DzBQRxUXg
— K’taka Health Dept (@DHFWKA) April 21, 2021
ಸರಣಿ ಸಭೆ
ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ತಡೆ ಮತ್ತು ಪರಿಣಾಮಕಾರಿ ಚಿಕಿತ್ಸೆ ಖಾತ್ರಿಪಡಿಸುವ ವಿಚಾರವಾಗಿ ಹಲವು ಮಹತ್ವದ ಬೆಳವಣಿಗೆಗಳು ನಡೆದವು. ಮುಂಜಾನೆಯಿಂದ ಹಲವು ಸಭೆಗಳನ್ನು ನಡೆಸಿದ್ದ ಸಚಿವ ಡಾ.ಕೆ.ಸುಧಾಕರ್, ‘ಶ್ರೀರಾಮನಂತೆ ಕಾಡಿಗೆ ಹೋಗುವುದು ಬೇಡ, ಹಿರಿಯರಿಗೆ ಲಸಿಕೆ ಕೊಡಿಸೋಣ’ ಎಂದು ಕರೆ ನೀಡಿದರು. ವೈದ್ಯಕೀಯ ಆಮ್ಲಜನಕಕ್ಕಾಗಿ ಕಾಲ್ಸೆಂಟರ್ ಸಂಖ್ಯೆಗೆ 89517 55722 ಕರೆ ಮಾಡಿ ಎಂದು ವಿನಂತಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಇಂದು ತಜ್ಞರೊಂದಿಗೆ ಟೆಲಿಕಾನ್ಫರೆನ್ಸ್ ಮೀಟಿಂಗ್ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಇಂದಿನಿಂದಲೇ ಹೊಸ ನಿಯಂತ್ರಣ ಕ್ರಮಗಳು ಜಾರಿಗೆ ಬರಲಿದ್ದು, ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
(Coronavirus in Karnataka Analysing Covid19 Numbers in State)
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 23,558 ಮಂದಿಗೆ ಸೋಂಕು, ಕೊರೊನಾದಿಂದ 116 ಜನರ ಸಾವು
ಇದನ್ನೂ ಓದಿ: ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯ: ಜನಾರೋಗ್ಯ ತಜ್ಞ ಡಾ.ಗಿರಿಧರ ಆರ್.ಬಾಬು ಅಭಿಪ್ರಾಯ