ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಅನಿವಾರ್ಯ: ಜನಾರೋಗ್ಯ ತಜ್ಞ ಡಾ.ಗಿರಿಧರ ಆರ್.ಬಾಬು ಅಭಿಪ್ರಾಯ
Epidemiologist Dr Giridhara R Babu: ಬೆಂಗಳೂರಿನಲ್ಲಿ 20ನೇ ಏಪ್ರಿಲ್ಗೆ 12,088 ಪ್ರಕರಣಗಳು ಪತ್ತೆಯಾಗಬಹುದು ಎಂಬ ಊಹೆಯಿದೆ. 604 ಐಸಿಯು ಬೆಡ್ಗಳು ಬೇಕಿರುತ್ತವೆ. 25ನೇ ಏಪ್ರಿಲ್ಗೆ 18,028 ಪ್ರಕರಣಗಳು ಪತ್ತೆಯಾಗಬಹುದು, 604 ಐಸಿಯು ಬೆಡ್ ಬೇಕಾಗಬಹುದು, ಮೇ 1ಕ್ಕೆ ಬೆಂಗಳೂರಿನಲ್ಲಿ 29,124 ಪ್ರಕರಣಗಳು ಪತ್ತೆಯಾಗಬಹುದು.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಲಾಕ್ಡೌನ್ ಅನಿವಾರ್ಯ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜನಾರೋಗ್ಯ ತಜ್ಞ ಡಾ.ಗಿರಧರ್ ಬಾಬು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಆಗಬೇಕಿದೆ. ತಾಂತ್ರಿಕ ಸಲಹಾ ಸಮಿತಿಯ ಸದಸ್ಯನಾಗಿ ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸಲಹಾ ಸಮಿತಿ ಸಭೆಯಲ್ಲಿಯೂ ಇದೇ ವಿಚಾರ ತಿಳಿಸುತ್ತೇನೆ ಎಂದು ಅವರು ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಮೇ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಕರಣಗಳು ದಿನಕ್ಕೆ 20 ಸಾವಿರ ಮುಟ್ಟುವ ಸಾಧ್ಯತೆಯಿದೆ. ಶೇ 5ರಷ್ಟು ಮಂದಿಗೆ ವೆಂಟಿಲೇಟರ್ ಸಮಸ್ಯೆ ಎದುರಾಗುತ್ತದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದೇ ದೊಡ್ಡ ಸವಾಲಾಗುತ್ತದೆ. ವೆಂಟಿಲೇಟರ್ ಸಮಸ್ಯೆಯಿಂದ ಜೀವಗಳು ಹೋಗುವ ಸಾಧ್ಯತೆ ಇದೆ. ಜೀವನಕ್ಕಿಂತ ಜೀವ ಬಹಳ ಮುಖ್ಯ. ನಾನೂ ಕೂಡ ವಾರದ ಹಿಂದೆ ಸರ್ಕಾರಕ್ಕೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಸಾಕು ಎಂದು ಹೇಳಿದ್ದೆ. ಆಗ ಈಗ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ಲಾಕ್ಡೌನ್ ಅನಿವಾರ್ಯ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ 20ನೇ ಏಪ್ರಿಲ್ಗೆ 12,088 ಪ್ರಕರಣಗಳು ಪತ್ತೆಯಾಗಬಹುದು ಎಂಬ ಊಹೆಯಿದೆ. 604 ಐಸಿಯು ಬೆಡ್ಗಳು ಬೇಕಿರುತ್ತವೆ. 25ನೇ ಏಪ್ರಿಲ್ಗೆ 18,028 ಪ್ರಕರಣಗಳು ಪತ್ತೆಯಾಗಬಹುದು, 604 ಐಸಿಯು ಬೆಡ್ ಬೇಕಾಗಬಹುದು, ಮೇ 1ಕ್ಕೆ ಬೆಂಗಳೂರಿನಲ್ಲಿ 29,124 ಪ್ರಕರಣಗಳು ಪತ್ತೆಯಾಗಬಹುದು. 1347 ಐಸಿಯು ಬೆಡ್ ಬೇಕಾಗಬಹುದು ಎಂದು ಡಾ.ಗಿರಿಧರ ಬಾಬು ವಿಶ್ಲೇಷಿಸಿದ್ದಾರೆ.
The bed capacity is hardly sufficient for few days. It is also necessary to reduce the speed of transmission. There are only few options any Government can have when the cases surge rapidly and resources are limited.
We need stricter mitigation and containment, starting now.
— Dr Giridhara R Babu (@epigiri) April 19, 2021
ಬೆಂಗಳೂರಿನ ಆಸ್ಪತ್ರೆಗಳ ಬೆಡ್ ಸಾಮರ್ಥ್ಯ ಮುಂದಿನ ಕೆಲ ದಿನಗಳಲ್ಲಿ ಬರಬಹುದಾದ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸಾಕಾಗಬಹುದು. ಆದರೆ ನಂತರದ ದಿನಗಳಲ್ಲಿ ಇದು ಸಾಲುವುದಿಲ್ಲ. ಹೀಗಾಗಿ ಸೋಂಕು ಪ್ರಸರಣವನ್ನು ತಡೆಯುವುದು ತುರ್ತಾಗಿ ಆಗಬೇಕಾದ ಕೆಲಸ. ನಮಗಿರುವ ಸೌಲಭ್ಯ, ಸಂಪನ್ಮೂಲಗಳೂ ಕಡಿಮೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣದಿಂದಲೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ರೋಗಿಗಳಿಗೆ ಆಕ್ಸಿಜನ್: ಮಹತ್ವದ ಸಭೆ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮತ್ತು ಲಭ್ಯತೆಗೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಆಕ್ಸಿಜನ್ ಉತ್ಪಾದಕರು, ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಿತು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಎಸಿಎಸ್ ಡಾ.ರಾಜ್ಕುಮಾರ್ ಖತ್ರಿ, ಆರೋಗ್ಯ ಇಲಾಖೆಯ ಎಸಿಎಸ್ ಜಾವೇದ್ ಅಖ್ತರ್, ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೊರೊನಾ ಸೋಂಕಿನ ಅಂಕಿಅಂಶಗಳ ವಿವರ ರಾಜ್ಯದಲ್ಲಿ ಸೋಮವಾರ (ಏಪ್ರಿಲ್ 19) ಒಟ್ಟು 15,785 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇಂದು ಒಂದೇ ದಿನ 146 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 9,618 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 97 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 11,76,850ಕ್ಕೆ (11.76 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 13,497 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 5,56,253ಕ್ಕೆ (5.56 ಲಕ್ಷ) ಏರಿಕೆಯಾಗಿದೆ. ಈವರೆಗೆ ಬೆಂಗಳೂರಿನಲ್ಲಿ ಒಟ್ಟು 5220 ಮಂದಿ ಮೃತಪಟ್ಟಿದ್ದಾರೆ.
(Lockdown necessary to limit spread of coronavirus in Karnataka says epidemiologist dr Giridhara R Babu)
ಇದನ್ನೂ ಓದಿ: ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಿದರೆ ಅಂದಾಜು 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ
ಇದನ್ನೂ ಓದಿ: ಲಾಕ್ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ
Published On - 9:15 pm, Mon, 19 April 21