ನಂಜನಗೂಡು: ದಲಿತರಿಗೆ ಕ್ಷೌರ ಸೇವೆ ಒದಗಿಸುತ್ತಿದ್ದ ಸೋದರರ ಆಶಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸ್ಪಂದನೆ

ಗ್ರಾಮದಲ್ಲಿರುವ ಇತರ ಎರಡು ಕ್ಷೌರದ ಅಂಗಡಿಗಳಲ್ಲಿಯೂ ದಲಿತರಿಗೆ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿದೆ. ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿಲ್ಲ, ನಿರ್ಬಂಧವನ್ನೂ ವಿಧಿಸಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದ್ದಾರೆ.

ನಂಜನಗೂಡು: ದಲಿತರಿಗೆ ಕ್ಷೌರ ಸೇವೆ ಒದಗಿಸುತ್ತಿದ್ದ ಸೋದರರ ಆಶಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸ್ಪಂದನೆ
ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುತ್ತಿರುವ ಸೋದರರು.

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹೋಬಳಿ ಕಪ್ಪಸೋಗೆ ಗ್ರಾಮದ ಕೊಟ್ಟಿಗೆಯಲ್ಲಿ ದಲಿತರಿಗೆ ಕ್ಷೌರ ಮಾಡುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದ ಸಹೋದರರ ನೆರವಿಗೆ ಸಮಾಜ ಕಲ್ಯಾಣ ಇಲಾಖೆ ಬಂದಿದೆ. ಈ ಕುರಿತು ಏಪ್ರಿಲ್ 16ರಂದು ಟಿವಿ9 ಕನ್ನಡ ಡಿಜಿಟಲ್ ಜಾಲತಾಣದಲ್ಲಿ ‘ಯುವಕರಿಂದ ಮನೆಮನೆಗೆ ತೆರಳಿ ಸೇವೆ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಯ ಸಹಾಯಕ ನಿರ್ದೇಶಕ ಜನಾರ್ದನ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವೈಯಕ್ತಿಕ ಸೌಲಭ್ಯದಡಿ ಸ್ವಂತ ಅಂಗಡಿ ತೆರೆಯಲು ಹಣ ಮಂಜೂರು ಮಾಡಲು ಶಿಫಾರಸು ಮಾಡಿದ್ದಾರೆ.

ಗ್ರಾಮದಲ್ಲಿರುವ ಇತರ ಎರಡು ಕ್ಷೌರದ ಅಂಗಡಿಗಳಲ್ಲಿಯೂ ದಲಿತರಿಗೆ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿದೆ. ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿಲ್ಲ, ನಿರ್ಬಂಧವನ್ನೂ ವಿಧಿಸಿಲ್ಲ. ಯುವಕರಾದ ಕೆ.ಸಿ.ಮಹಾದೇವ ಮತ್ತು ಕೆ.ಸಿ.ಸಿದ್ದರಾಜು ಸೋದರರು ಉದ್ಯಮಶೀಲರು. ಸುಮಾರು ಹತ್ತು ವರ್ಷಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಸೇವೆ ಒದಗಿಸುತ್ತಿದ್ದಾರೆ. ಇವರ ಆಸಕ್ತಿ ಗಮನಿಸಿ ಅಂಗಡಿಗಾಗಿ ಸಾಲ ಒದಗಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

‘ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಸ್ವಂತ ಅಂಗಡಿ ತೆರೆಯಲು ಸಾಧ್ಯವಾಗಿಲ್ಲ. ಗ್ರಾಮದಲ್ಲಿ ಅಂಗಡಿ ತೆರೆಯಲು ಸಹಾಯ ಮಾಡಿ ಎಂದು ಯುವಕರು ಕೋರಿದ್ದಾರೆ. ಅಂಬೇಡ್ಕರ್ ನಿಗಮದಿಂದ ವೈಯಕ್ತಿಕ ಸೌಲಭ್ಯದಡಿ ಸ್ವಂತ ಅಂಗಡಿ ತೆರೆಯಲು ಸಾಲ ಮಂಜೂರು ಮಾಡಿಕೊಡಿ’ ಎಂದು ನಂಜಗೂಡು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಿಫಾರಸು ಮಾಡಿರುವ ಪತ್ರ ಟಿವಿ9 ಕನ್ನಡ ಡಿಜಿಟಲ್​ಗೆ ಲಭ್ಯವಾಗಿದೆ.

‘ನಮಗೆ 30 ಗುಂಟೆ ಒಣಭೂಮಿಯಿದೆ. ಅದರಲ್ಲಿ ಅಲ್ಪಸ್ವಲ್ಪ ಕೃಷಿ ಮಾಡುವ ಹಂಬಲ ಹೊಂದಿದ್ದೇವೆ. ಇತರರ ಕೃಷಿ ಭೂಮಿಯಲ್ಲೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತೇವೆ. ಕೆಲಸ ಇಲ್ಲದ ದಿನಗಳಲ್ಲಿ ಎಲೆಕ್ಟ್ರಿಶಿಯನ್ ಆಗಿಯೂ ಕೆಲಸ ಮಾಡುತ್ತೇವೆ. ಕೊರೊನಾ ಪಿಡುಗು ವ್ಯಾಪಕವಾಗಿ ಆವರಿಸಿದ ದಿನಗಳಲ್ಲೂ ದಲಿತ ಸಮುದಾಯದ ಜನರಿಗೆ ಕ್ಷೌರ ಸೇವೆ ಒದಗಿಸಿದ್ದೇವೆ. ಕ್ಷೌರಕ್ಕೆ ₹40 ಮತ್ತು ಶೇವಿಂಗ್​ಗೆ ₹20ನ್ನು ಪಡೆಯುತ್ತೇವೆ. ಅಗತ್ಯ ಇರುವವರಿಗೆ ಮನೆಮನೆಗೆ ತೆರಳಿ ಸೇವೆಯನ್ನೂ ನೀಡುತ್ತೇವೆ’ ಎಂಬ ಕೆ.ಸಿ.ಮಹದೇವ್ ಅವರ ಮಾತನ್ನು ಟಿವಿ9 ಜಾಲತಾಣ ಏಪ್ರಿಲ್ 16ರ ವರದಿಯಲ್ಲಿ ಉಲ್ಲೇಖಿಸಿತ್ತು.

(Social Welfare Department Recommends for Personal Loan to Dalit Brothers in Nanjangud)

ಇದನ್ನೂ ಓದಿ: ಮೈಸೂರಿನಲ್ಲಿ ಇಬ್ಬರು ಯುವಕರಿಂದ ಮನೆಮನೆಗೆ ತೆರಳಿ ಸೇವೆ

ಇದನ್ನೂ ಓದಿ: ಗದಗದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ಅರಿವು ಮೂಡಿಸಲು ದಲಿತರು ಕುಡಿದ ಚಹಾ ಗ್ಲಾಸ್ ತೊಳೆದ ತಹಶೀಲ್ದಾರ್

Click on your DTH Provider to Add TV9 Kannada