ಬೆಂಗಳೂರು, ನವೆಂಬರ್ 21: ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನ ನೇಮಕ ವಿಚಾರವಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಂಭಾವ್ಯರ ಪಟ್ಟಿ ಸಿದ್ಧವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜತೆಗಿನ ಸಭೆಯ ನಡುವೆಯೇ ಸುರ್ಜೇವಾಲ ಅವರು ಶಾಸಕರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದಾರೆ.
ಸಭೆಯಲ್ಲಿ ಸಚಿವರಾದ ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಕೂಡ ಭಾಗವಹಿಸಿದ್ದಾರೆ. ಸಭೆ ನಡುವೆಯೇ ಹಿರಿಯ ಶಾಸಕರಿಗೆ ಸುರ್ಜೇವಾಲ ದೂರವಾಣಿ ಕರೆ ಮಾಡಿದ್ದು, ಪಟ್ಟಿ ಪ್ರಕಟಿಸಿದ ನಂತರ ತಕರಾರು ಮಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಅಲ್ಲದೆ, ಕೊಟ್ಟ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದಾರೆ. ಏನಾದರೂ ತಕರಾರು ಇದ್ದರೆ ಈಗಲೇ ತಿಳಿಸಿ ಎಂದೂ ಹೇಳಿದ್ದಾರೆ.
ಯಾರೆಲ್ಲ ಒಪ್ಪಿಕೊಳ್ಳಲಿದ್ದಾರೆಂದು ಖಚಿತಪಡಿಸಿಕೊಳ್ಳುತ್ತಿರುವ ಸುರ್ಜೇವಾಲ, ಒಬ್ಬೊಬ್ಬರೇ ಹಿರಿಯ ಶಾಸಕರಿಗೆ ಕರೆ ಮಾಡಿ ಮಾತಾಡುತ್ತಿದ್ದಾರೆ. ಸಚಿವಸ್ಥಾನಕ್ಕೆ ಪಟ್ಟು ಹಿಡಿದಿರುವ ಕೆಲ ಹಿರಿಯ ಶಾಸಕರು ಒಪ್ಪಿಕೊಳ್ಳದಿದ್ರೆ, ಪಟ್ಟಿ ಪ್ರಕಟಿಸಿದ ನಂತರ ಅಧಿಕಾರ ವಹಿಸಿಕೊಳ್ಳದಿದ್ದರೆ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಈಗಲೇ ಗೊಂದಲ ಬಗೆಹರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ