ಕೊರೊನಾ ನಿಯಂತ್ರಣಕ್ಕೆ ಜನರ ಅಸಹಕಾರ; ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸಿಎಂ ಸೂಚನೆ
Bengaluru Coronavirus News: ಜಿಮ್, ಈಜುಕೊಳ, ಪಬ್, ಪಾರ್ಟಿ ಹಾಲ್ಗಳನ್ನು 2 ವಾರ ಬಂದ್ ಮಾಡುವುದು ಸೂಕ್ತ. ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ಮಿತಿ ಹೇರುವಂತೆ ಸಿಎಂ ನೇತೃತ್ವದ ಸಭೆಯಲ್ಲಿ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ.
ಬೆಂಗಳೂರು: ದಿನೇದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ನಟ, ನಟಿಯರು ಗಮನ ಸೆಳೆಯುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು. ಜನಸಂದಣಿ ನಿಯಂತ್ರಿಸಲು ಮಾನಿಟಿರಿಂಗ್ ಮಾಡಬೇಕು. ಉತ್ಸವ, ಹಾಗೂ ಧಾರ್ಮಿಕ ಹಬ್ಬಗಳ ಸಾರ್ವಜನಿಕ ಆಚರಣೆಯನ್ನು ನಿಲ್ಲಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಮುಂದಿನ ಎರಡು ವಾರಗಳ ಕಾಲ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ಮಾಡುವಂತಿಲ್ಲ. ಜಾತ್ರಾ ಮಹೋತ್ಸವಗಳನ್ನೂ ಎರಡೂ ವಾರಗಳ ಕಾಲ ನಡೆಸುವಂತಿಲ್ಲ ಎಂದು ಸಭೆಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.ಈ ಸಭೆಯಲ್ಲಿ ರಾಜ್ಯ ಸರ್ಕಾರದ ಸಚಿವರು, ವಲಯ ಉಸ್ತುವಾರಿಗಳು ಪಾಲ್ಗೊಂಡು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ಕೆಲವು ಸೂಚನೆಗಳನ್ನು ಸಿಎಂ ಯಡಿಯೂರಪ್ಪರಿಗೆ ನೀಡಿದ್ದಾರೆ.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಕೊವಿಡ್ ನಿಯಂತ್ರಣಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸಿಎಂ ಯಡಿಯೂರಪ್ಪರಿಗೆ ಸಲಹೆ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲು ಸಿಎಂ ನೇತೃತ್ವದ ಸಭೆಯಲ್ಲಿ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ.
ಜಿಮ್, ಈಜುಕೊಳ, ಪಬ್, ಪಾರ್ಟಿ ಹಾಲ್ಗಳನ್ನು 2 ವಾರ ಬಂದ್ ಮಾಡುವುದು ಸೂಕ್ತ. ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಕರ ಮಿತಿ ಹೇರುವಂತೆ ಸಿಎಂ ನೇತೃತ್ವದ ಸಭೆಯಲ್ಲಿ ಸಚಿವ ಡಾ.ಸುಧಾಕರ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಎರಡು ವಾರಗಳ ಶಾಲಾ ಕಾಲೇಜುಗಳನ್ನು ತೆರೆಯಬಾರದು. ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಎಷ್ಟು ಸೀಟ್ಗಳಿವೆಯೋ ಅಷ್ಟೇ ಜನರನ್ನು ಕರೆದೊಯ್ಯಬೇಕು ಎಂದು ಸಚಿವ ಡಾ.ಕೆ. ಸುಧಾಕರ್ ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‌ಡೌನ್ ಜಾರಿಗೊಳಿಸುವುದಿಲ್ಲ. ಆದರೆ ಇಂದಿನಿಂದ 15 ದಿನ ಸತ್ಯಾಗ್ರಹ, ಚಳವಳಿಗಳನ್ನು ನಡೆಸುವಂತಿಲ್ಲ. ಕೊವಿಡ್ ನಿಯಂತ್ರಿಸಲು ಸಾರ್ವಜನಿಕರು ಜಾಗೃತರಾಗಿರಬೇಕು. ಎಲ್ಲರೂ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ನಾಳೆಯಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿದ್ದ ರಾಜ್ಯದ ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಬಗ್ಗೆ ಬರೆದ ಪತ್ರವನ್ನು ಓದಿದ ಸಿಎಂ ಯಡಿಯೂರಪ್ಪ, ಜನರನ್ನು ಭಯ ಪಡಿಸದೇ ಕೆಲ ನಿರ್ಣಯಗಳನ್ನ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮಾಸ್ಕ್ ಸ್ಯಾನಿಟೈಸ್ ಲಸಿಕೆ ಹೆಚ್ಚಳ ಮಾಡುವ ಬಗ್ಗೆ ಸಲಹೆ ನೀಡಿದ್ದರು. ಅದನ್ನು ಕೂಡ ನಿಮ್ಮ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಸಂಪರ್ಕಿತರ ಪತ್ತೆಗೆ ಕಂದಾಯ ಇಲಾಖೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಖಾಸಗಿ ಆಸ್ಪತ್ರೆಗಳಗೂ ಬೆಡ್ಗಳನ್ನು ನೀಡಲು ತಿಳಿಸಲಾಗಿದೆ. ಕೊವಿಡ್ ನಿಯಂತ್ರಣಕ್ಕೆ ಯಾವುದೇ ಹಣದ ಸಮಸ್ಯೆ ಇಲ್ಲ. ಸದ್ಯದ ಸಮಾಧಾನದ ವಿಚಾರವೆಂದರೆ ಸ್ಲಂಗಳಲ್ಲಿ ಕೊರೊನಾ ಪ್ರಕರಣಗಳು ಬಹಳ ವಿರಳವಾಗಿದ್ದು, ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಅಪಾರ್ಟ್ಮೆಂಟ್ಗಳಲ್ಲಿ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸುತ್ತೇವೆ. ಪ್ಲಾಟ್ಗಳಲ್ಲಿ ಬೇರೆ ಬೇರೆ ಪಾರ್ಟಿಗಳನ್ನು ಮಾಡಲು ಇನ್ಮುಂದೆ ಅವಕಾಶವಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದೊಂದು ವಲಯಕ್ಕೆ ಓರ್ವ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಬೆಂಗಳೂರಿನ 8 ವಲಯಗಳಿಗೆ ಅಧಿಕಾರಿಗಳ ನೇಮಿಸಲಾಗಿದೆ. ವಲಯವಾರು ಅಧಿಕಾರಿಗಳ ಪಟ್ಟಿ ಇಂತಿದೆ:
ಯಲಹಂಕ ವಲಯ-ವಿ.ಅನ್ಬುಕುಮಾರ್ ಮಹದೇವಪುರ ವಲಯ-ಡಾ.ಎನ್.ಮಂಜುಳಾ ದಾಸರಹಳ್ಳಿ ವಲಯ-ಡಾ.ಪಿ.ಸಿ.ಜಾಫರ್ ಬೊಮ್ಮನಹಳ್ಳಿ ವಲಯ-ಡಾ.ರವಿಕುಮಾರ್ ಬೆಂಗಳೂರು ಪೂರ್ವ ವಲಯ-ಮನೋಜ್ ಕುಮಾರ್ ಮೀನಾ ಬೆಂಗಳೂರು ಪಶ್ಚಿಮ ವಲಯ-ಉಜ್ವಲ್ ಕುಮಾರ್ ಘೋಷ್ ಬೆಂಗಳೂರು ದಕ್ಷಿಣ ವಲಯ-ಪಂಕಜ್ ಕುಮಾರ್ ಪಾಂಡೆ ರಾಜರಾಜೇಶ್ವರಿನಗರ ವಲಯ-ಡಾ.ಆರ್.ವಿಶಾಲ್ ನೇಮಕ
ಇದನ್ನೂ ಓದಿ: Coronavirus News LIVE: 24 ಗಂಟೆಯಲ್ಲಿ68,020 ಕೊರೊನಾ ಪ್ರಕರಣ; ವೇಗವಾಗಿ ಹಬ್ಬುತ್ತಿದೆ ಸೋಂಕು
WHO-China joint study: ಕೊರೊನಾ ಹುಟ್ಟಿದ್ದು ಲ್ಯಾಬ್ನಲ್ಲಿ ಅಲ್ಲ, ಪ್ರಾಣಿಯಿಂದ ಬಂದಿದ್ದು!
Published On - 6:45 pm, Mon, 29 March 21