ಹೆರಿಗೆಗೆ ಬಂದವರಿಗೆ ಕೊರೊನಾ ಸೊಂಕು ಪತ್ತೆ; ತುಮಕೂರಿನಲ್ಲಿ ಹೆಚ್ಚಾಗುತ್ತಿದೆ ಕೊವಿಡ್
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗಿದ್ದು, ನಾಲ್ವರು ಗರ್ಭಿಣಿಯರಿಗೆ ಕೊರೊನಾ ಕಾಣಿಸಿಕೊಂಡಿದೆ. ಹೆರಿಗೆಗೂ ಮುನ್ನ ಕೊವಿಡ್ ಟೆಸ್ಟ್ ಮಾಡಿಸಿದಾಗ ಸೊಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಸದ್ಯ ಆತಂಕ ಮನೆಮಾಡಿದೆ.
ತುಮಕೂರು: ಕೊರೊನಾ ಎರಡನೇ ಅಲೆ ಈಗಾಗಲೇ ದೇಶದೆಲ್ಲೆಡೆ ಆವರಿಸಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಜನತೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಸಿಗದೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಂದ ಮಾತ್ರಕ್ಕೆ ಸಿಲಿಕಾನ್ ಸಿಟಿಗೆ ಮಾತ್ರ ಕೊರೊನಾ ದಾಪುಗಾಲಿಟ್ಟಿಲ್ಲ ಬದಲಿಗೆ ಇನ್ನಿತರ ಜಿಲ್ಲೆಗಳಲ್ಲೂ ಕೊರೊನಾ ಹಾವಳಿ ಜೋರಾಗಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗಿದ್ದು, ನಾಲ್ವರು ಗರ್ಭಿಣಿಯರಿಗೆ ಕೊರೊನಾ ಕಾಣಿಸಿಕೊಂಡಿದೆ. ಹೆರಿಗೆಗೂ ಮುನ್ನ ಕೊವಿಡ್ ಟೆಸ್ಟ್ ಮಾಡಿಸಿದಾಗ ಸೊಂಕು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಸದ್ಯ ಆತಂಕ ಮನೆಮಾಡಿದೆ.
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣ ನಿನ್ನೆ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಒಂದು ಸಾವಿರ ಗಡಿ ದಾಟಿದ್ದು, ತುಮಕೂರು ಮಹಾನಗರ ಪಾಲಿಕೆಯ ನೌಕರ ಹಾಗೂ ತಾಲ್ಲೂಕು ಪಂಚಾಯತಿಯ ನೌಕರರಿಗೂ ಕೊವಿಡ್ ದೃಢಪಟ್ಟಿದೆ. ಹೀಗಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಐವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಎರಡನೇ ಬೆಂಗಳೂರಾಗುತ್ತಾ ತುಮಕೂರು ಸಾವಿರದ ಗಡಿ ದಾಟಿ ಮುನ್ನುಗುತ್ತಿರುವ ಸೊಂಕಿತರ ಸಂಖ್ಯೆಯನ್ನು ತಡೆಯಲು ತುಮಕೂರು ಜಿಲ್ಲಾಡಳಿತ ಹರಸಾಹಸ ಪಡುತ್ತಿದ್ದು, ಹಳ್ಳಿಗಳಲ್ಲಿ ಕೊವಿಡ್ ಟೆಸ್ಟ್ ನಡೆಸಿ ಸೊಂಕಿತರ ಪತ್ತೆ ಹಚ್ಚುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ನಿರತವಾಗಿದೆ. ಇಷ್ಟಾದರೂ ಇದುವರೆಗೆ ಕೊವಿಡ್ ಕೇರ್ ಸೆಂಟರ್ ಅನ್ನು ಜಿಲ್ಲಾಡಳಿತ ಈ ಭಾಗದಲ್ಲಿ ತೆರೆಯದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಸೋಂಕಿನ ವಿಚಾರದಲ್ಲಿ ತುಮಕೂರು ಎರಡನೇ ಬೆಂಗಳೂರು ಆಗಲಿದೆಯಾ ಎಂಬ ಭಯದಲ್ಲಿದ್ದಾರೆ.
ತುಮಕೂರಿನಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ ಬೆಂಗಳೂರಿನ ಸಮೀಪದಲ್ಲಿಯೇ ಇರುವ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ 1000 ದಾಟಿರುವುದು ಆತಂಕ ಮೂಡಿಸಿದೆ. ಬುಧವಾರ ಒಂದೇ ದಿನ ತುಮಕೂರು ಜಿಲ್ಲೆಯಲ್ಲಿ ಒಟ್ಟು 1199 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ, ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಸಾಮಾನ್ಯವಾಗಿ ಒಂದು ಸಾವಿರ ದಾಟುತ್ತಿರಲಿಲ್ಲ. ಆದರೆ ತುಮಕೂರಿನಲ್ಲಿ ಮಾತ್ರ ಮಂಗಳವಾರದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಮಂಗಳವಾರ ತುಮಕೂರು ಜಿಲ್ಲೆಯಲ್ಲಿ 1055 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು, ನಾಲ್ವರು ಮೃತಪಟ್ಟಿದ್ದರು. ತುಮಕೂರಿನಲ್ಲಿ ಈವರೆಗೆ ಪ್ರಸ್ತುತ 5020 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 275 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:
Covid-19 Karnataka Numbers: ದಾಖಲೆ ಬರೆದ ಕೊರೊನಾ ಸೋಂಕಿತರ ಸಂಖ್ಯೆ; ಬೆಂಗಳೂರು, ತುಮಕೂರಿನಲ್ಲಿ ತೀವ್ರ ಹೆಚ್ಚಳ
Published On - 8:29 am, Thu, 22 April 21