ಮೈಸೂರು: ಮಹಾಮಾರಿ ಕೊರೊನಾ ವೈರಸ್ ಜಿಲ್ಲೆಯ ಜನರನ್ನು ನರಳುವಂತೆ ಮಾಡಿದೆ. ಹೀಗಾಗಿ ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತೊಂದು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಜಿಲ್ಲೆಯ ಮಹಿಳೆಯರಿಗಾಗಿ ಇಂಟರ್‌ನ್ಯಾಷನಲ್ ಯೂತ್ ಹಾಸ್ಟೆಲ್‌ನಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಮೈಸೂರಿನ ಗೋಕುಲಂ 2ನೇ ಹಂತದಲ್ಲಿರುವ ಹಾಸ್ಟೆಲ್ನಲ್ಲಿ ಸಿಸಿಸಿಗೆ ಸಿದ್ಧತೆ ನಡೆದಿದೆ.
ಮಹಿಳಾ ಕೊವಿಡ್ ಕೇರ್ ಸೆಂಟರ್‌ನಲ್ಲಿ 64 ಬೆಡ್ ವ್ಯವಸ್ಥೆ ಮಾಡಲಾಗಿದೆ. ವಿವಿ ಪುರಂ ಹೆರಿಗೆ ಆಸ್ಪತ್ರೆ ಸಿಸಿಸಿಯ ವೈದ್ಯಕೀಯ ಅಗತ್ಯಗಳ ಉಸ್ತುವಾರಿ ಹೊತ್ತುಕೊಂಡಿದೆ. ಆಶಾಕಿರಣ ಆಸ್ಪತ್ರೆ ವೈದ್ಯರು ಮತ್ತು ನರ್ಸ್‌ಗಳು ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೈಸೂರಿನಲ್ಲಿ ಇನ್ನೂ 3 ಮಹಿಳಾ ಸಿಸಿಸಿ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸರ್ಕಾರಿ ಪ್ರಕೃತಿ ಚಿಕಿತ್ಸೆ, ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 50 ಹಾಸಿಗೆಗಳ ಸಿಸಿಸಿ, ಮೆಟ್ರಿಕ್ ನಂತರದ ಬಿಸಿಎಂ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ 300 ಹಾಸಿಗೆಗಳ ಸಿಸಿಸಿ, ಫರೂಕಿಯಾ ಫಾರ್ಮಸಿ ಕಾಲೇಜಿನಲ್ಲಿ 200 ಹಾಸಿಗೆಗಳ ಸಿಸಿಸಿ ಒಟ್ಟು ಮೂರು ಸಿಸಿಸಿಗಳಲ್ಲಿ 550 ಬೆಡ್ ವ್ಯವಸ್ಥೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇವೆಲ್ಲಾ ಮಹಿಳಾ ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಉಚಿತ ಸೇವೆ ಕಲ್ಪಿಸಲಾಗಿದೆ.
ರಿವರ್ಸ್ ಐಸೋಲೇಷನ್ ಕಾರ್ಯಕ್ರಮ
ಮೈಸೂರು ಮಹಾನಗರ ಪಾಲಿಕೆ ವಾತ್ಸಲ್ಯ ಕೇಂದ್ರದ ಹೆಸರಿನಲ್ಲಿ ರಿವರ್ಸ್ ಐಸೋಲೇಷನ್ ಕಾರ್ಯಕ್ರಮಕ್ಕೆ ಮೇ 31ರಂದು ಚಾಲನೆ ನೀಡಲಾಗಿತ್ತು. ಈ ಕಾರ್ಯಕ್ರಮದ ಮೂಲಕ ರೋಗ ಗುಣಲಕ್ಷಣಗಳಿಲ್ಲದ ಸೋಂಕಿತರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಸಹಕಾರಿಯಾಗುವಂತೆ, ಅವರ ಮನೆಯ ಉಳಿದ ನಾನ್ ಕೊವಿಡ್ ಸದಸ್ಯರಿಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ.
ಸೋಂಕಿತರು ಕೊವಿಡ್ ಸೆಂಟರ್ ಬದಲಾಗಿ ತಮ್ಮ ಮನೆಯಲ್ಲೇ ಇದ್ದರೆ ಹೆಚ್ಚಿನ ಆತ್ಮವಿಶ್ವಾದಿಂದ ಇರುತ್ತಾರೆ. ಇದರಿಂದ ಅವರು ಬೇಗ ಗುಣಮುಖರಾಗಲು ಸಹಕಾರಿಯಾಗುತ್ತದೆ. ಜೊತೆಗೆ ಮನೆಯ ಇತರ ಸದಸ್ಯರನ್ನು ಅವರಿಂದ ಪ್ರತ್ಯೇಕವಾಗಿ ಇರಿಸುವ ಕಾರಣ ಅವರಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಇದಕ್ಕೆ ಮೈಸೂರು ಮಹಾನಗರಪಾಲಿಕೆಗೆ ತೇರಾಪಂತ್ ಯುವಕರ ಸಂಘ, ಜಿಎಸ್‌ಎಸ್ ಯೋಗಾಸಂಸ್ಥೆ, ರೋಟರಿ ಸಂಸ್ಥೆ, ಆರೋಗ್ಯ ಭಾರತಿ, ಪ್ರಮತಿ ವಿದ್ಯಾಸಂಸ್ಥೆಯವರು ಸಾಥ್ ನೀಡಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ತಿಳಿಸಿದ್ದರು.
ಇದನ್ನೂ ಓದಿ: ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
Published On - 8:48 am, Wed, 2 June 21