ಬೆಂಗಳೂರು: ಬೆಂಗಳೂರಿನಲ್ಲಿ ಮುಂಗೈ ಶಸ್ತ್ರಚಿಕಿತ್ಸೆಗೊಳಪಟ್ಟ ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಯುವತಿಯ ಪೋಷಕರು ಆರೋಪ ಮಾಡಿದ್ದಾರೆ. ಮಾರತ್ತಹಳ್ಳಿಯಲ್ಲಿರುವ ಜೀವಿಕಾ ಆಸ್ಪತ್ರೆ ವಿರುದ್ಧ ಆರೋಪ ಕೇಳಿಬಂದಿದೆ. ಬಾಗೇಪಲ್ಲಿ ಮೂಲದ 21 ವರ್ಷದ ತೇಜಸ್ವಿನಿ ಮೃತಪಟ್ಟ ಯುವತಿ. ಬಾತ್ ರೂಮ್ನಲ್ಲಿ ಬಿದ್ದು ಆಕೆ ಮುಂಗೈಗೆ ಗಾಯ ಮಾಡಿಕೊಂಡಿದ್ದರು. ಮುಂಗೈ ಶಸ್ತ್ರಚಿಕಿತ್ಸೆಗಾಗಿ ಜೀವಿಕಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಪರೇಷನ್ ಆದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕಿ ಸಾವು:
ಚಳ್ಳಕೆರೆ: ಚಳ್ಳಕೆರೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಾಯಕನಹಟ್ಟಿ ಗ್ರಾಮದ 2 ವರ್ಷದ ಬಾಲಕಿ ಪ್ರಕೃತಿ ಮೃತಪಟ್ಟಿದ್ದಾಳೆ. ತಾಲೂಕು ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷದ ಆರೋಪ ಕೇಳಿಬಂದಿದೆ. ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ತಾಲೂಕು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷದಿಂದ ಬಾಲಕಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಚಳ್ಳಕೆರೆ ತಾಲೂಕು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವು:
ಕೋಲಾರ: ವಡಗೂರು ಗೇಟ್ ಬಳಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ಮೆಡಿಕಲ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಕೇರಳ ಮೂಲದ ರಾಯನ್ ರಾಭಿನ್ ಸಾವನ್ನಪ್ಪಿದ್ದಾನೆ. ಗಾಯಾಳು ಅರುಣ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿಯಾಗಿ ವೃದ್ಧೆ ಸಾವು:
ರಾಯಚೂರು: ಸಿರವಾರ ತಾಲೂಕಿನ ಕಸ್ವಿ ಕ್ಯಾಂಪ್ ಬಳಿ ಕಾರು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 60 ವರ್ಷದ ವೃದ್ಧೆ ಲಕ್ಷ್ಮೀ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಬಳಿಕ ಕಾರು ಚಾಲಕನನ್ನು ಸಿರವಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಸ್ವಿ ಕ್ಯಾಂಪ್ ನಿವಾಸಿ ಲಕ್ಷ್ಮೀ (60) ಮೃತ ವೃದ್ಧೆ. ಲಕ್ಷ್ಮೀ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಆಕೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರ್ ನಲ್ಲಿದ್ದ ರವಿಗೌಡ ಹಾಗೂ ಪತ್ನಿಗೆ ಸಣ್ಣಪುಟ್ಟ ಗಾಯವಾಗಿದೆ. ಆರೋಪಿ ಕಾರು ಚಾಲಕ ರವಿಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ