ಅನ್ನದಾತನ ಬದುಕಿಗೆ ಕೊಳ್ಳಿ ಇಟ್ಟ ವಿದ್ಯುತ್ ತಂತಿಗಳು : ಬೆಳೆದು ನಿಂತಿದ್ದ ಅಡಿಕೆ, ಬಾಳೆ ಬೆಳೆ ಬೆಂಕಿಗಾಹುತಿ!
ರೈತ ಪ್ರವೀಣನ ಜಮೀನಿನಲ್ಲಿ ಬೆಳೆದಿದ್ದ ಐದರಿಂದ ಆರು ಲಕ್ಷ ರುಪಾಯಿ ಬೆಲೆ ಬಾಳುವ ಅಡಿಕೆ ಮತ್ತು ಬಾಳೆ ಬೆಳೆ ಸುಟ್ಟು ಕರಕಲಾಗಿವೆ. ಅದರ ಜೊತೆಗೆ ಜಮೀನಿಗೆ ನೀರು ಹಾಯಿಸಲು ಬಳಸುತ್ತಿದ್ದ ಪೈಪುಗಳು, ವಿದ್ಯುತ್ ಬೋರ್ಡ್ ಹೀಗೆ ನೀರಾವರಿ ಕೃಷಿಗೆ ಬಳಸುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಹಾಳಾಗಿವೆ.
ಹಾವೇರಿ: ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿರುವ ಆ ರೈತನಿಗೆ ಕೃಷಿ ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಇರುವ ನಾಲ್ಕು ಎಕರೆ ಜಮೀನಿನಲ್ಲಿ ಅಲ್ಲಿ ಇಲ್ಲಿ ಸಾಲ ಮಾಡಿಕೊಂಡು ಬೋರವೆಲ್ ಕೊರೆಸಿ, ನೀರಾವರಿ ಕೃಷಿ ಮಾಡಿಕೊಂಡು ಅಡಿಕೆ ಮತ್ತು ಬಾಳೆ ಬೆಳೆ ಬೆಳೆದಿದ್ದರು. ಅಡಿಕೆ ಮತ್ತು ಬಾಳೆ ಬೆಳೆ ಆಗಸದೆತ್ತರಕ್ಕೆ ಬೆಳೆದು ನಿಂತಿತ್ತು. ಆದರೆ ವಿದ್ಯುತ್ ತಂತಿಗಳಿಂದ ಹೊತ್ತಿಕೊಂಡ ಬೆಂಕಿಯ ಕಿಡಿ, ರೈತನ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ.
ಬೆಳೆ ಸುಟ್ಟ ವಿದ್ಯುತ್ ತಂತಿಗಳು.. ಹಿರೇಕೆರೂರು ಪಟ್ಟಣದ ರೈತ ಪ್ರವೀಣ ಅಬಲೂರ ಎಂಬುವರು ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಆದರೆ ರೈತ ಪ್ರವೀಣನ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದವು. ಆರಂಭದಲ್ಲಿ ಬೆಳೆ ಚಿಕ್ಕದಾಗಿದ್ದಗಲೆ ರೈತನಿಗೆ ವಿದ್ಯುತ್ ತಂತಿಗಳು ಆತಂಕ ಸೃಷ್ಟಿಸಿದ್ದವು. ಆಗಿನಿಂದಲೂ ರೈತ ಪ್ರವೀಣ ಸಾಕಷ್ಟು ಬಾರಿ ವಿದ್ಯುತ್ ಇಲಾಖೆ ಅಧಿಕಾರಿಗಳು ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳ ಮಾರ್ಗ ಬದಲಿಸುವಂತೆ ಮನವಿ ಮಾಡಿಕೊಂಡಿದ್ದನು. ಆದರೂ ಅಧಿಕಾರಿಗಳು ಪ್ರವೀಣನ ಮನವಿಗೆ ಸ್ಪಂಧಿಸಿರಲಿಲ್ಲ. ಹೀಗಾಗಿ ವಿದ್ಯುತ್ ತಂತಿಗಳಿಂದ ಹೊತ್ತಿಕೊಂಡ ಕಿಡಿ ಬಾಳೆ ಮತ್ತು ಅಡಿಕೆ ಬೆಳೆ ಸುಟ್ಟು ಕರಕಲಾಗುವಂತೆ ಮಾಡಿದೆ.
ಬೆಳೆ ಜೊತೆಗೆ ಪರಿಕರಗಳು ಸುಟ್ಟು ಕರಕಲು.. ರೈತ ಪ್ರವೀಣನ ಜಮೀನಿನಲ್ಲಿ ಬೆಳೆದಿದ್ದ ಐದರಿಂದ ಆರು ಲಕ್ಷ ರುಪಾಯಿ ಬೆಲೆ ಬಾಳುವ ಅಡಿಕೆ ಮತ್ತು ಬಾಳೆ ಬೆಳೆ ಸುಟ್ಟು ಕರಕಲಾಗಿವೆ. ಅದರ ಜೊತೆಗೆ ಜಮೀನಿಗೆ ನೀರು ಹಾಯಿಸಲು ಬಳಸುತ್ತಿದ್ದ ಪೈಪುಗಳು, ವಿದ್ಯುತ್ ಬೋರ್ಡ್ ಹೀಗೆ ನೀರಾವರಿ ಕೃಷಿಗೆ ಬಳಸುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಹಾಳಾಗಿವೆ. ವಿದ್ಯುತ್ ತಂತಿಗಳಿಂದ ಹೊತ್ತಿಕೊಂಡ ಕಿಡಿಗೆ ಬೆಳೆಗಳು ಮಾತ್ರವಲ್ಲ ರೈತನ ಬದುಕಿಗೆ ಕೊಳ್ಳಿ ಬಿದ್ದಂತಾಗಿದೆ.
ಬೆಳೆ ಹಾಳಾದ ಮೇಲೆ ಜಮೀನಿಗೆ ಬಂದರು.. ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿರುವ ಬಗ್ಗೆ ರೈತ ಪ್ರವೀಣ ಸಾಕಷ್ಟು ಬಾರಿ ವಿದ್ಯುತ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದ. ಆದರೆ ಅಧಿಕಾರಿಗಳು ಕನಿಷ್ಠಪಕ್ಷ ರೈತನ ಜಮೀನಿಗೆ ಭೇಟಿ ನೀಡುವ ಗೋಜಿಗೆ ಹೋಗಿರಲಿಲ್ಲ. ಆದರೆ ವಿದ್ಯುತ್ ತಂತಿಯ ಕಿಡಿ ಹೊತ್ತಿಕೊಂಡು ಬೆಳೆ ಸುಟ್ಟು ಕರಕಲಾದ ಮೇಲೆ ವಿದ್ಯುತ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿಗೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದರು. ಆದರೆ ಐದರಿಂದ ಆರು ಲಕ್ಷ ರುಪಾಯಿಯಷ್ಟು ಬೆಳೆ ಮತ್ತು ಕೃಷಿ ಪರಿಕರಗಳು ಸುಟ್ಟು ಹಾಳಾಗಿವೆ.
ಬಾಳೆ ಮತ್ತು ಅಡಿಕೆ ಬೆಳೆದಿದ್ದ ಜಮೀನಿಗೆ ಬೆಂಕಿ ಬಿದ್ದು ಹಾಳಾದ ಮೇಲೆ ಜಮೀನಿಗೆ ಭೇಟಿ ನೀಡಿ ವಿದ್ಯುತ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ರೈತ ತನ್ನ ಸಂಕಟವನ್ನು ಅಧಿಕಾರಿಗಳ ಬಳಿ ಹೇಳಿಕೊಂಡ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತುಟಿ ಬಿಚ್ಚದೆ ಹಾನಿಯಾಗಿರುವ ಸ್ಥಳವನ್ನು ನೋಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ವಿದ್ಯುತ್ ತಂತಿಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತವೆ ಎಂದು ಹೇಳುತ್ತಲೆ ಇದ್ದೆ. ಆದರೆ ಈಗ ಬೆಂಕಿ ಹೊತ್ತಿಕೊಂಡು ಬೆಳೆ ಸುಟ್ಟು ಕರಕಲಾಗಿದೆ. ಅಧಿಕಾರಿಗಳು ಈಗ ಬಂದು ಸಮಾಧಾನ ಹೇಳುತ್ತಿದ್ದಾರೆ. ಹಾಳಾದ ಮೇಲೆ ಏನು ಪ್ರಯೋಜನ. ರೈತರ ಬಗ್ಗೆ ನಿರ್ಲಕ್ಷ್ಯ ತೋರುವ ಇಂತಹ ಅಧಿಕಾರಿಗಳ ಮೇಲೆ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. -ಪ್ರವೀಣ ಅಬಲೂರ – ಬೆಳೆ ಹಾನಿಗೊಳಗಾದ ರೈತ.
ಇದನ್ನೂ ಓದಿ:ತಡರಾತ್ರಿ ಆಹಾರವ ಹುಡುಕಿ ಬಂದ ಕಾಡಾನೆ.. ಟ್ರಾನ್ಸ್ಫಾರ್ಮರ್ ಮೂಲಕ ವಿದ್ಯುತ್ ಪ್ರವಹಿಸಿ ಸಾವು
Published On - 10:51 am, Sun, 7 March 21