ಬೆಂಗಳೂರು: ಬಿತ್ತನೆ ಮಾಡಿದ ಬೆಳೆಗಳ ಸ್ಪಷ್ಟ ಚಿತ್ರಣವನ್ನು ಹೊಂದಲು ಮತ್ತು ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಭೂಮಿಯಲ್ಲಿ ನೀರಾವರಿ ಪ್ರಕಾರವನ್ನು ಅಳವಡಿಸಿಕೊಳ್ಳಲು ಸರ್ಕಾರ ಸುಲಭ ವಿಧಾನ ಪರಿಚಯಿಸಿದೆ. ಪರಿಸರ ವ್ಯವಸ್ಥೆಯಲ್ಲಿನ ಅನೇಕ ಇಲಾಖೆಗಳು ಮತ್ತು ಇತರ ಏಜೆಂಟರು (ಬ್ಯಾಂಕುಗಳು, ವಿಮಾ ಏಜೆನ್ಸಿಗಳು ಇತ್ಯಾದಿ) ಬಳಸಬಹುದಾದ ರೈತ ಮತ್ತು ಬೆಳೆ ದತ್ತಾಂಶಕ್ಕಾಗಿ ರಾಜ್ಯದ ಏಕೈಕ ಹಾಗೂ ಪರಿಶೀಲಿಸಿದ ಸತ್ಯದ ಮೂಲವನ್ನು ರಚಿಸುವ ಸಾಧನವಾಗಿ ಕ್ರಾಪ್ ಸರ್ವೆ ಅಪ್ಲಿಕೇಷನ್ ಬಳಸಲಾಗುತ್ತದೆ. ಕ್ರಾಪ್ ಸರ್ವೆ 2021-22 ಸಾಲಿನ ಅಪ್ಲಿಕೇಷನ್ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ.
ಇದು ಪರಿಹಾರ, ಆರ್‌ಟಿಸಿ, ಸಂರಕ್ಷಣೆ ಮುಂತಾದ ಎಲ್ಲಾ ಡಾಟಾ ದಾಖಲೆಗಳಲ್ಲಿ ಸ್ಥಿರತೆಯನ್ನು ನೀಡುತ್ತದೆ. ಎಲ್ಲಾ ವ್ಯವಸ್ಥೆಗಳಿಗೆ ಸಮಯೋಚಿತ ರೀತಿಯಲ್ಲಿ ನಿಖರ ಮತ್ತು ನವೀಕೃತ ವಿಧಾನದ ಮೂಲಕ ರೈತ ಮತ್ತು ಬೆಳೆ ದತ್ತಾಂಶಗಳ ಬಗ್ಗೆ ತಿಳಿಯಲು ಹಾಗೂ ದತ್ತಾಂಶಗಳ ಮಾಹಿತಿಗೆ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳುವುದು ಈ ಕ್ರಾಪ್ ಸರ್ವೆ ಅಪ್ಲಿಕೇಷನ್ ಗುರಿಯಾಗಿದೆ.
ಈಗ ರೈತರೇ ಸ್ವತ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ಈ ಅಪ್ಲಿಕೇಷನ್ ಮುಖಾಂತರ ಅಪ್ಲೋಡ್ ಮಾಡಬಹುದು. ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ವಿವಿಧ ಸವಲತ್ತು ಒದಗಿಸಲು ಮತ್ತು ಮತ್ತು ಆರ್.ಟಿ.ಸಿಯಲ್ಲಿ ಅಳವಡಿಸಲು ಬಳಸಲಾಗುತ್ತದೆ.
ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡದೆ ಇದ್ದರೆ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸೌಲಭ್ಯ ಪಡೆಯಲು ವಂಚಿತರಾಗುವ ಸಂಭವವಿರುತ್ತದೆ. ಈ ಸಮೀಕ್ಷೆಯಿಂದ ಪ್ರಕೃತಿ ವಿಕೋಪದ ವೇಳೆ ಬೆಳೆ ಹಾನಿ ಕುರಿತು ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ ಹಾಗೂ ಬೆಳೆ ವಿಮೆ ಯೋಜನೆ ಸರ್ವೆ ನಂಬರ್, ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ.
ಕರ್ನಾಟಕ ಸರ್ಕಾರದ ಇ-ಗವರ್ನೆನ್ಸ್ ನಿರ್ದೇಶಕರು ಈ ಅಪ್ಲಿಕೇಷನ್ ನೀಡಿದ್ದಾರೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಪ್ಲಿಕೇಷನ್ ಲಭ್ಯವಿದೆ. ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹೆಸರು ನಮೂದಿಸಿ, ಸರ್ವೆ ಸಂಖ್ಯೆ, ಮಾಲೀಕರ ಹೆಸರು, ಜಾಗದ ವಿವರ ಹಾಗೂ ಆಧಾರ್ ಕಾರ್ಡ್ ಮೂಲಕ ಈ ಅಪ್ಲಿಕೇಷನ್ ಬಳಸಬಹುದಾಗಿದೆ.
ಅಪ್ಲಿಕೇಷನ್ನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ: ಕ್ರಾಪ್ ಸರ್ವೆ ಅಪ್ಲಿಕೇಷನ್
ಆದರೆ, ಅಪ್ಲಿಕೇಷನ್ ಫೀಡ್ಬ್ಯಾಕ್ ವಿಭಾಗದಲ್ಲಿ ಬಳಕೆದಾರರು ಕೆಲವು ದೂರುಗಳನ್ನು ದಾಖಲಿಸಿದ್ದಾರೆ. ಸ್ವತಃ ತಮ್ಮ ಜಾಗದಲ್ಲಿ ನಿಂತುಕೊಂಡರೂ ಜಿಪಿಎಸ್ ಸೆನ್ಸಿಂಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ವೆ ನಂಬರ್ ಡೌನ್ಲೋಡ್ ಮಾಡಲು ಆಗುತ್ತಿಲ್ಲ. ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಲು ಕೂಡ ಆಗುತ್ತಿಲ್ಲ ಎಂದು ಕೆಲವು ಬಳಕೆದಾರರು ದೂರು ನೀಡಿದ್ದಾರೆ.
ಇದನ್ನೂ ಓದಿ: ಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ: ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ರೈತರಿಗೆ ಮಾಹಿತಿ
National farmers day 2020: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ, ಇದೀಗ ಕೇಂದ್ರದಿಂದಲೂ ಆ್ಯಪ್ ಅಳವಡಿಕೆ!
Published On - 6:17 pm, Sat, 17 July 21