ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆಯ ವೇಳೆ ಬಹಳಷ್ಟು ಸೈಬರ್ ಕ್ರೈಂ ಅಪರಾಧಗಳು ದಾಖಲಾಗಿದ್ದವು. ಕೊವಿಡ್-19 ಸೋಂಕಿತರಿಗೆ ಕೂಡ ಹಲವಷ್ಟು ಸಮಸ್ಯೆಗಳು ಉಂಟಾಗಿದ್ದವು. ವೈದ್ಯಕೀಯ ಆಮ್ಲಜನಕ ಪೂರೈಕೆ, ಆಕ್ಸಿಜನ್ ಕಾನ್ಸನ್ಟ್ರೇಟರ್, ರೆಮ್ಡಿಸಿವಿರ್ ಇಂಜೆಕ್ಷನ್, ಬ್ಲಾಕ್ ಫಂಗಸ್ ಔಷಧ ಇವುಗಳ ಬಗ್ಗೆಯೂ ಸೈಬರ್ ಕ್ರೈಂ ಅಪರಾಧಗಳು ನಡೆದಿದ್ದವು. ಆರೋಗ್ಯ ಸಮಸ್ಯೆಯನ್ನೂ ಜನರ ಅಸಹಾಯಕತೆಯನ್ನೂ ದುರ್ಬಳಕೆ ಮಾಡಿಕೊಂಡಂತಹ ಕೆಟ್ಟ ಪ್ರಸಂಗಗಳು ವರದಿಯಾಗಿದ್ದವು. ಇಂತಹುದೇ ಒಂದು ಕೆಟ್ಟ ಸೈಬರ್ ಕ್ರೈಂ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
ನಗರದ ಒಂದು ಪ್ರಮುಖ ಆಸ್ಪತ್ರೆಯ ಹೆಸರಿನಲ್ಲಿ ನಕಲಿ ವೆಬ್ಸೈಟ್ ಒಂದನ್ನು ತೆರೆದ ಕ್ರಿಮಿನಲ್ಗಳು ಕಿಡ್ನಿ ಮಾರಾಟಕ್ಕೆ ವೇದಿಕೆ ಮಾಡಿಕೊಟ್ಟಿದ್ದಾರೆ. ಕಿಡ್ನಿ ಮಾರಾಟ ಮಾಡುವುದಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ನೀಡುವುದಾಗಿ ವಂಚಕರು ನಕಲಿ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ವರದಿಯ ಪ್ರಕಾರ, ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ ಆಸ್ಪತ್ರೆಯ ಡಾ. ನಿರಂಜನ್ ರೈ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ದಾಖಲಾಗಿರುವ ಪ್ರಕರಣದ ಅನ್ವಯ ಡಾ. ಥಾಮಸ್ ಎಂಬವರ ವಿರುದ್ಧ ವಂಚಕ ವೆಬ್ಸೈಟ್ ನಡೆಸುತ್ತಿದ್ದ ಆರೋಪದಲ್ಲಿ ದೂರು ದಾಖಲು ಮಾಡಿದ್ದಾರೆ.
ಪ್ರಕರಣದ ವಿಶೇಷ ಏನು ಅಂದರೆ, ಫೇಕ್ ವೆಬ್ಸೈಟ್ ಕೂಡ ಮಣಿಪಾಲ್ ಆಸ್ಪತ್ರೆಯ ವೆಬ್ಸೈಟ್ಗೆ ಬಹಳಷ್ಟು ಹೋಲುವಂತಿದೆ. ಹೀಗೆ ತಯಾರಾಗಿರುವ ಫೇಕ್ ವೆಬ್ಸೈಟ್ನಲ್ಲಿ ಡಾ. ಥಾಮಸ್ ಜೋಸೆಫ್ ಎಂಬ ಹೆಸರಿನಲ್ಲಿ ಇರುವ ಸಂದೇಶ ಹೀಗಿದೆ. ನಿಮ್ಮ ಕಿಡ್ನಿಯನ್ನು 5 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿ. ಅದಕ್ಕಾಗಿ ನಮ್ಮನ್ನು ಸಂಪರ್ಕಿಸಿ ಹಾಗೂ ಇಂದೇ ಹಣ ಪಡೆದುಕೊಳ್ಳಿ. ನೀವು ಒಂದು ಕಿಡ್ನಿ ಮಾರಿಯೂ ಸಹಜ ಜೀವನ ನಡೆಸಬಹುದು ಎಂದು ಅದರಲ್ಲಿ ಹೇಳಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಈ ವೆಬ್ಸೈಟ್ಗೆ ಭೇಟಿ ನೀಡಿರುವ ಬಹಳಷ್ಟು ಮಂದಿಯನ್ನು ವೆಬ್ಸೈಟ್ ಬೇರೆ ಕಡೆಗೆ ರಿಡೈರೆಕ್ಟ್ ಮಾಡಿದೆ. ಇದರಲ್ಲಿ ರಿಜಿಸ್ಟ್ರೇಷನ್ ಫೀಸ್ ಎಂಬ ವಿಭಾಗ ಇರುವುದು ಕೂಡ ಕಂಡುಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ನಾವು ವಂಚಕರ ಜಾಲವನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದೇವೆ. ಆರೋಪಿಗಳು ಬೇರೆ ರಾಜ್ಯದವರು ಎಂದು ಕಾಣುತ್ತದೆ. ನಾವು ತನಿಖೆಯ ಆರಂಭಿಕ ಹಂತದಲ್ಲಿ ಇದ್ದೇವೆ. ಯಾರಾದರೂ ಇದರಿಂದಾಗಿ ಹಣ ಕಳೆದುಕೊಂಡವರು ಇದ್ದರೆ ನಮಗೆ ಮಾಹಿತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಟೈಮ್ಸ್ ನೌ ನ್ಯೂಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಹೀಗೆ ಮೋಸದ ಜಾಲ ಬೆಳೆಸಿಕೊಂಡು ಹಣ ಕೀಳುವ ಪ್ರಕರಣಗಳು ಹಲವಾರು ವರದಿಯಾಗುತ್ತಿದೆ. ಫೇಸ್ಬುಕ್ ಖಾತೆ ಮೂಲಕವೂ ಹಣ ಕೇಳುವ ಘಟನೆಗಳು ನಡೆದಿದೆ. ಈ ಬಗ್ಗೆ ಜನರೇ ಸ್ವಯಂ ಜಾಗೃತಿ ಇಟ್ಟುಕೊಳ್ಳುವುದು. ಸಾಧ್ಯವಾದಷ್ಟು ಎಚ್ಚರಿಕೆಯಿಂದ ಆನ್ಲೈನ್ ವ್ಯವಹಾರ ನಡೆಸುವುದು. ಅಪರಿಚಿತರಿಗೆ, ಅಪರಿಚಿತ ವೆಬ್ಸೈಟ್ಗಳಿಗೆ, ಅನುಮಾನಾಸ್ಪದ ಸೈಟ್ಗಳಿಗೆ ಹಣ ನೀಡದಿರುವುದು ಒಳ್ಳೆಯದು.
ಇದನ್ನೂ ಓದಿ: ಅನುಪಮಾ ಪರಮೇಶ್ವರನ್ ನಕಲಿ ಮಾರ್ಕ್ಸ್ ಕಾರ್ಡ್ ವೈರಲ್; ಈ ಹಗರಣದ ಹಿಂದೆ ಯಾರೆಲ್ಲ ಇದ್ದಾರೆ?
₹17.72 ಕೋಟಿ ನಕಲಿ ಕರೆನ್ಸಿ ಕೈವಶವಿರಿಸಿಕೊಂಡಿದ್ದ ಜ್ಯೋತಿಷಿ ಪೊಲೀಸರ ವಶಕ್ಕೆ