
ಬೆಂಗಳೂರು, ಏಪ್ರಿಲ್ 30: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಹೆಚ್ಚು ಸೈಬರ್ ಅಪರಾಧ ಕೃತ್ಯಗಳು ನಡೆಯುತ್ತವೆ ಎಂಬ ಭಾವನೆ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಕರ್ನಾಟಕದ (Karnataka) ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಅಪರಾಧ ಕೃತ್ಯಗಳು (Cybercrime in rural Karnataka) ಗಣನೀಯವಾಗಿ ಏರಿಕೆ ಆಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಅಂಕಿ ಅಂಶವನ್ನು ಉಲ್ಲೇಖಿಸಿ, ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಅಪರಾಧ ಕೃತ್ಯಗಳು ದುಪ್ಪಟ್ಟಾಗಿರುವುದು ತಿಳಿದುಬಂದಿದೆ ಎಂದು ವರದಿಯೊಂದು ತಿಳಿಸಿದೆ.
2022 ರಲ್ಲಿ 880 ಸೈಬರ್ ಅಪರಾಧ ಕೃತ್ಯಗಳು ವರದಿಯಾಗಿದ್ದರೆ, 2024ರಲ್ಲಿ 1,600 ಆಗಿರುವುದು ತಿಳಿದುಬಂದಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಬುಡಕಟ್ಟು ಜನ ವಾಸದ ಪ್ರದೇಶಗಳಲ್ಲಿ ಈ ಹಿಂದೆಲ್ಲ ಆನ್ಲೈನ್ ವಂಚನೆ ವರದಿಯಾಗುತ್ತಿರಲಿಲ್ಲ. ಅಂಥ ಕಡೆಗಳಲ್ಲೂ ಈಗ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದು ಬೆಳಕಿಗೆ ಬಂದಿದೆ.
2024 ರಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ 12 ಸೈಬರ್ ಕ್ರೈಂ ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ 2023 ರಲ್ಲಿ ಕೇವಲ ಒಂದು ಮತ್ತು 2022 ರಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ ಎಂಬುದು ಗಮನಾರ್ಹ.
ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳು ಮತ್ತು ಡಿಜಿಟಲ್ ಮಾಧ್ಯಮ ಬಳಕೆ ಹೆಚ್ಚುತ್ತಿರುವುದೇ ಸೈಬರ್ ಕ್ರೈಂ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ. ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ರ್ಯಾಂಡಮ್ ಆಗಿ ಫೋನ್ ನಂಬರ್ಗಳನ್ನು ಪಡೆದುಕೊಂಡು ಅವುಗಳನ್ನು ಗುರಿಯಾಗಿಸಿಕೊಂಡು ವಂಚನೆ ಎಸಗುತ್ತಾರೆ. ಇದರಿಂದಾಗಿ ಗ್ರಾಮೀಣ ಜನರೂ ಸಹ ನಗರ ಪ್ರದೇಶಗಳ ಮಂದಿಯಷ್ಟೇ ವಂಚನೆಗೆ ಗುರಿಯಾಗುತ್ತಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಹಿಂದೆ ಸೈಬರ್ ಕ್ರೈಂ ಕೃತ್ಯಗಳ ಕುರಿತು ದೂರು ನೀಡುವುದು ಸುಲಭವಾಗಿರಲಿಲ್ಲ. ಆದರೆ, ಈಗ ಸರ್ಕಾರ ಸಹಾಯವಾಣಿ ಸಂಖ್ಯೆ 1930 ಆರಂಭಿಸಿದ್ದು, ತಕ್ಷಣವೇ ದೂರು ಸಲ್ಲಿಸುವುದು ಸಂತ್ರಸ್ತರಿಗೆ ಸುಲಭವಾಗಿದೆ. ಹೀಗಾಗಿ ಸಂತ್ರಸ್ತರು ದೂರು ನೀಡಲು ಮುಂದೆಬರುತ್ತಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಇತ್ತೀಚೆಗೆ ವೃದ್ಧ ದಂಪತಿ ಸೈಬರ್ ವಂಚನೆಗೆ ಗುರಿಯಾಗಿ ಮತ್ತು ಡಿಜಿಟಲ್ ಬಂಧನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು, ಸೈಬರ್ ಅಪರಾಧಗಳು ಎಷ್ಟು ಗಂಭೀರ ಮಾನಸಿಕ ಹಾನಿಗೆ ಕಾರಣವಾಗುತ್ತವೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಜನವರಿಯಲ್ಲಿ ಘಟಿಸಿದ್ದ ಮತ್ತೊಂದು ಸೈಬರ್ ಅಪರಾಧ ಪ್ರಕರಣದಲ್ಲಿ, ಮೈಸೂರಿನ ಯುವಕನೊಬ್ಬನಿಗೆ ವಂಚಕರು 4.7 ಲಕ್ಷ ರೂ. ಸಾಲ ನೀಡುವ ಆಮಿಷವೊಡ್ಡಿ ನಂತರ 24 ಗಂಟೆಗಳ ಕಾಲ ಡಿಜಿಟಲ್ ಬಂಧನದಲ್ಲಿ ಇರಿಸಿ ವಂಚಿಸಿದ್ದರು.