Halal Tag: ಹಲಾಲ್ ಟ್ಯಾಗ್ ಇರುವ ವಸ್ತು ಬಳಸದಂತೆ ಜನಜಾಗೃತಿ

ಯುಗಾದಿ ಬಳಿಕ ಇದೀಗ ದೀಪಾವಳಿ ಸಮಯದಲ್ಲಿಯೂ ಧರ್ಮ ದಂಗಲ್ ಹೆಚ್ಚಾಗಿದ್ದು, ಕರಾವಳಿ ಭಾಗದಲ್ಲಿ ಹಲಾಲ್ ಟ್ಯಾಗ್ ವಸ್ತುಗಳನ್ನು ಬಳಸದಂತೆ ಹಿಂದೂಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ.

Halal Tag: ಹಲಾಲ್ ಟ್ಯಾಗ್ ಇರುವ ವಸ್ತು ಬಳಸದಂತೆ ಜನಜಾಗೃತಿ
ಹಲಾಲ್ ವಿರುದ್ಧ ಅಭಿಯಾನ ಮತ್ತು ಪ್ರತಿಭಟನೆ
Edited By:

Updated on: Oct 23, 2022 | 2:34 PM

ಮಂಗಳೂರು: ಯುಗಾದಿ ಸಮಯದಲ್ಲಿ ಹಲಾಲ್ ಬಹಿಷ್ಕಾರ ಜೋರಾಗಿ ಕೇಳಿಬಂದಿತ್ತು. ಇದೀಗ ದೀಪಾವಳಿ ಸಮಯದಲ್ಲಿಯೂ ಅಂತಹದ್ದೇ ಕೂಗು ಬಲವಾಗಿ ಕೇಳಿಬರಲು ಆರಂಭವಾಗಿದ್ದು, ಹಲಾಲ್ ಟ್ಯಾಗ್ ಇರುವ ವಸ್ತುಗಳನ್ನ ಬಹಿಷ್ಕರಿಸುವಂತೆ ಕರಾವಳಿ ಭಾಗಗಳಲ್ಲಿ ಕರೆ ನೀಡಲಾಗಿದೆ. ಹಲಾಲ್ ಟ್ಯಾಗ್ ಇರುವ ವಸ್ತು ಬಳಸದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ‌ ವತಿಯಿಂದ ಅಭಿಯಾನ ಆರಂಭಿಸಲಾಗಿದೆ. ಮನೆ, ಅಂಗಡಿಗಳಿಗೆ ತೆರಳಿ ಕರಪತ್ರ ಹಂಚಿ ಹಲಾಲ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಮಂಗಳೂರು, ಪುತ್ತೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆಯೂ ನಡೆಯುತ್ತಿದೆ.

ದೀಪಾವಳಿ ಹಬ್ಬದ ಖರೀದಿ ಸಂದರ್ಭದಲ್ಲಿ ಹಿಂದೂಗಳು ಹಲಾಲ್ ಟ್ಯಾಗ್ ಇರುವ ವಸ್ತುಗಳನ್ನು ಖರೀದಿಸದಂತೆ ಹಾಗೂ ಅದನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಅಭಿಯಾನ ಆರಂಭಿಸಿದ ಹಿಂದೂ ಜನಜಾಗೃತಿ ಸಮಿತಿ ಕರ ಪತ್ರಗಳನ್ನು ಹಂಚುವಲ್ಲಿ ತೊಡಗಿಕೊಂಡಿದೆ.

ದೇಶದ ಆರ್ಥಿಕ ವ್ಯವಸ್ಥೆಗೆ ಸವಾಲಾಗಿ ಪರ್ಯಾಯ ಹಲಾಲ್ ಆರ್ಥಿಕತೆಯ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದ್ದು, ಪ್ರತಿ ಉತ್ಪನ್ನಕ್ಕೆ ಹಲಾಲ್ ಪ್ರಮಾಣ ಪತ್ರ ನೀಡಲು ಇಸ್ಲಾಮಿ ಸಂಸ್ಥೆಗಳು ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿವೆ. ಹೀಗೆ ಸಂಗ್ರಹವಾದ ಹಣದಲ್ಲಿ ಸಾವಿರಾರು ಕೋಟಿ ರೂಪಾಯಿ ಭಯೋತ್ಪಾದಕ ಸಂಘಟನೆಗಳಿಗೆ ನೀಡಿರುವ ಆರೋಪ ಮಾಡಲಾಗುತ್ತಿದೆ. ಈ ಎಲ್ಲದರ ಬಗ್ಗೆ ಕರಪತ್ರ ಹಂಚುವ ಮೂಲಕ ಹಾಗೂ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Sun, 23 October 22