Sarbananda Sonowal Speech: ಕರ್ನಾಟಕದಲ್ಲಿ ಬಂದರು ಸುಧಾರಣೆಗೆ 15 ಸಾವಿರ ಕೋಟಿ ಮೊತ್ತದ ಯೋಜನೆ; ಸರ್ಬಾನಂದ ಸೋನಾವಾಲ
ಬ್ಲೂ ಸೂಪರ್ ಆಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಭಾರತದ ಕಂಟೇನರ್ ನಿರ್ವಹಣೆ ಸಾಮರ್ಥ್ಯವೂ ವೃದ್ಧಿಗೊಂಡಿದೆ ಎಂದು ನುಡಿದರು.
ಮಂಗಳೂರು: ಭಾರತದ ಆರ್ಥಿಕ ಪ್ರಗತಿಗೆ ಕರ್ನಾಟಕವು ತನ್ನದೇ ಆದ ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ (Sarbanand Sonavala) ಹೇಳಿದರು. ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಾಗರಮಾಲ ಯೋಜನೆಯಡಿ ಕರ್ನಾಟಕದಲ್ಲಿ 55 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ₹ 15 ಸಾವಿರ ಅಂದಾಜುವೆಚ್ಚದ ಈ ಯೋಜನೆಗಳು 2025ರ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದರು. ಕರ್ನಾಟಕದಲ್ಲಿ ಈಗಾಗಲೇ ₹ 4 ಸಾವಿರ ಕೋಟಿ ವೆಚ್ಚದ 18 ಯೋಜನೆಗಳು ಪೂರ್ಣಗೊಂಡಿವೆ ಎಂದು ವಿವರಿಸಿದರು.
‘ನಮಸ್ಕಾರ, ಓಂ ಗಣಪತಯೇ ನಮಃ’ ಎಂದು ಸೋನಾವಾಲ ಭಾಷಣ ಆರಂಭಿಸಿದರು. ತಕ್ಷಣವೇ ನೆರೆದಿದ್ದ ಜನರು ಕೈಗಳನ್ನು ಬೀಸಿ ‘ಮೋದಿ ಮೋದಿ’ ಎಂದು ಕೂಗಲು ಆರಂಭಿಸಿದರು. ಸೋನಾವಲ ಅವರು ಮಾತು ಮುಂದುವರಿಸಿ, ‘ನಮ್ಮ ದೇಶದ ಅತಿಪ್ರಿಯ ನೇತಾರರಾದ ನರೇಂದ್ರ ಮೋದಿ ಜಿ’ ಎಂದು ಕರೆದರು. ಈ ಮಾತಿಗೂ ಜನರು ಖುಷಿಯಿಂದ ಹರ್ಷೋದ್ಗಾರ ಮಾಡಿದರು.
ನಂತರ ಮಾತು ಮುಂದುವರಿಸಿದ ಸೋನಾವಾಲ, ಇಂದು ಗಣೇಶನ ಹಬ್ಬದ ಸಂಭ್ರಮದಲ್ಲಿ ಕರಾವಳಿಯಲ್ಲಿ ನರೇಂದ್ರ ಮೋದಿ ಅವರು ಸುಮಾರು 4 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮಂಗಳೂರು ಬಂದರು ಪ್ರಾಧಿಕಾರವು ‘ಮರಿಟೈಮ್ ಇಂಡಿಯಾ ವಿಷನ್ 2030’ರ ಆಶಯಕ್ಕೆ ಅನುಗುಣವಾಗಿ ಯಾಂತ್ರೀಕರಣಗೊಳ್ಳುತ್ತಿದೆ. ಪ್ರಧಾನಿ ಅವರ ಶೂನ್ಯ ಮಾಲಿನ್ಯ ಕರೆಗೆ ಪೂರಕವಾಗಿ ಮಂಗಳೂರು ಬಂದರು ಪ್ರಾಧಿಕಾರವು ಸೌರಶಕ್ತಿಯನ್ನು ಅಳವಡಿಸಿಕೊಂಡಿದೆ ಎಂದರು.
ಮಂಗಳೂರು ಬಂದರು ಸಂಪೂರ್ಣ ಗಣಕೀರಣವಾಗಿದೆ (ಡಿಜಿಟಲೈಸ್). ಬಂದರು ಪರಿಸರ ಸ್ನೇಹಿ ನೀರು ನಿರ್ವಹಣೆಯಿಂದಲೂ ಗಮನ ಸೆಳೆಯುತ್ತಿದೆ. ಇದು ವಿದ್ಯುತ್ ಹಾಗೂ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಿದೆ. ಈ ಸಾಧನೆಗಾಗಿ ಹಲವು ಪುರಸ್ಕಾರಗಳೂ ಸಂದಿವೆ ಎಂದು ಹೇಳಿದರು.
ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಕಳೆದ 8 ವರ್ಷಗಳಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದೆ. ಬಂದರು ಕ್ಷೇತ್ರದಲ್ಲಿ ಸಾಗರಮಾಲೆ ಯೋಜನೆಯಡಿ 802 ಪ್ರಾಜೆಕ್ಟ್ಗಾಗಿ 5.4 ಲಕ್ಷ ರೂಪಾಯಿ ಅನುದಾನ ಘೋಷಿಸಲಾಗಿದೆ. 1.12 ಲಕ್ಷ ಕೋಟಿ ಮೊತ್ತದ 217 ಯೋಜನೆಗಳು ಪೂರ್ಣಗೊಂಡಿವೆ. ಗತಿಶಕ್ತಿ ಯೋಜನೆಯಡಿ ದೇಶೀಯ ಜಲ ಸಾರಿಗೆಗೆ ಒತ್ತು ನೀಡಲಾಗುತ್ತಿದೆ. ಸಾಗರ ಆಧರಿತ ಆರ್ಥಿಕತೆಯಲ್ಲಿಯೂ ಭಾರತವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಶೀಘ್ರದಲ್ಲಿಯೇ ಬ್ಲೂ ಸೂಪರ್ ಆಗುವತ್ತ ಭಾರತ ದಾಪುಗಾಲು ಹಾಕುತ್ತಿದೆ. ಭಾರತದ ಕಂಟೇನರ್ ನಿರ್ವಹಣೆ ಸಾಮರ್ಥ್ಯವೂ ವೃದ್ಧಿಗೊಂಡಿದೆ ಎಂದು ನುಡಿದರು.
ಜಲ ಮಾರ್ಗ ವಿಕಾಸ ಯೋಜನೆಗಳು ದೇಶಕ್ಕೆ ಸಮೃದ್ಧಿ ತಂದುಕೊಡುತ್ತಿದೆ. ದೇಶೀಯ ಜಲಮಾರ್ಗಗಳಲ್ಲಿಯೂ ಸರಕುಸಾಗಣೆ ಪ್ರಮಾಣ ಹೆಚ್ಚಾಗುತ್ತಿದೆ. ಇಂದು ಲೋಕಾರ್ಪಣೆಯಾದ ಐಎನ್ಎಸ್ ವಿಕ್ರಾಂತ್ ಭಾರತದ ಸ್ವಾವಲಂಬಿಯಾಗುವ ವಿಚಾರದಲ್ಲಿ ಇರಿಸಿರುವ ದೃಢ ನಿರ್ಧಾರದ ದ್ಯೋತಕವಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡದು ಎಂದು ಶ್ಲಾಘಿಸಿದರು.
Published On - 3:39 pm, Fri, 2 September 22