ಬೆಳ್ಳಂ ಬೆಳಗ್ಗೆ 150 ಪೊಲೀಸರಿಂದ ಮಂಗಳೂರು ಜೈಲ್ ಮೇಲೆ ದಾಳಿ; ಗಾಂಜಾ, ಡ್ರಗ್ಸ್, ಮೊಬೈಲ್ಸ್ ಪತ್ತೆ
ಮಂಗಳೂರಿನ ಜೈಲಿನ ಮೇಲೆ ಮಂಗಳೂರು ಪೊಲೀಸರು ಮುಂಜಾನೆ 4 ಗಂಟೆಗೆ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಏಕಕಾಲದಲ್ಲಿ 150 ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದು ಗಾಂಜಾ, ಡ್ರಗ್ಸ್, ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇನ್ನು ಡ್ರಗ್ಸ್, ಗಾಂಜಾ ಪತ್ತೆಯ ಹಿನ್ನಲೆಯಲ್ಲಿ ತನಿಖೆಗೆ ಮಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.

ಮಂಗಳೂರು, ಜುಲೈ.25: ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಂಜಾ (Ganja) ಮತ್ತು ಡ್ರಗ್ಸ್ (Drugs) ಪತ್ತೆಯಾಗಿದೆ. ಜೊತೆಗೆ ಮೊಬೈಲ್ ಫೋನ್ಗಳು, ಡಿವೈಸ್ಗಳು ಪತ್ತೆಯಾಗಿವೆ. ಮಂಗಳೂರು ಪೊಲೀಸರು ಏಕಾಏಕಿ ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿದ್ದು ಅಲ್ಲಿ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.
ದಾಳಿ ವೇಳೆ ಇಪ್ಪತ್ತೈದು ಮೊಬೈಲ್, ಒಂದು ಬ್ಲೂ ಟೂತ್ ಡಿವೈಸ್, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಚಾರ್ಜರ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಸಿಕ್ಕಿದ್ದು ಪೊಲೀಸರು ಆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಜೈಲು ಖೈದಿಗಳ ಜೊತೆಗಿದ್ದ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೇಟ್ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ. ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಜೈಲಿನ ಮೇಲೆ ಏಕಕಾಲದಲ್ಲಿ ನೂರೈವತ್ತಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದರು. ಡ್ರಗ್ಸ್, ಗಾಂಜಾ ಪತ್ತೆಯ ಹಿನ್ನಲೆಯಲ್ಲಿ ತನಿಖೆಗೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಆದೇಶ ಹೊರಡಿಸಿದ್ದಾರೆ.
ಅರಸೀಕೆರೆ ಪಟ್ಟಣದಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷ
ಹಾಸನ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದೆ. ಅರಸೀಕೆರೆ ಪಟ್ಟಣದ ಮಾರುತಿ ನಗರದಲ್ಲಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದೆ. ಪಟ್ಟಣದ KSRTC ಬಸ್ ಡಿಪೋ ಹಿಂಭಾಗದಲ್ಲಿ ಖತರ್ನಾಕ್ ಚಡ್ಡಿಗ್ಯಾಂಗ್‌ನ ಕಳ್ಳ ಓಡಾಡಿದ್ದಾನೆ. ಕೈಯಲ್ಲಿ ಆಯುಧ ಹಿಡಿದು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳ ಹೊಂಚು ಹಾಕಿದ್ದಾನೆ. ಕಳ್ಳನ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ: ಮುಡಾ ನಡುವೆ ಮತ್ತೊಂದು ಬಹುಕೋಟಿ ಭೂ ಹಗರಣ; ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಆಸ್ತಿ ಕಬಳಿಕೆ ಆರೋಪ
ಕುರಿ ಮೇಯಿಸುತ್ತಿದ್ದಾಗ ಕುರಿಗಾಹಿ ಮೇಲೆ ಕರಡಿ ದಾಳಿ
ಕುರಿ ಮೇಯಿಸುತ್ತಿದ್ದಾಗ ಕುರಿಗಾಹಿ ಮೇಲೆ ಕರಡಿ ದಾಳಿ ನಡೆಸಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಸಿಲುಮನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಕರಡಿ ದಾಳಿಯಿಂದ ಕುರಿಗಾಹಿ ಚಲುವರಾಜು ಗಂಭೀರವಾಗಿ ಗಾಯಗೊಂಡಿದ್ದು, ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಅಂಗನವಾಡಿಯ ಕುಕ್ಕರ್, ಪಾತ್ರೆ ಕದ್ದ ಖದೀಮರು
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಗಾಂಧಿನಗರದಲ್ಲಿರುವ ಅಂಗನವಾಡಿಗೆ ಖದೀಮರು ಕನ್ನ ಹಾಕಿದ್ದಾರೆ. ಅಂಗನವಾಡಿಯಲ್ಲಿದ್ದ ಕುಕ್ಕರ್, ಪಾತ್ರೆ ಇತರೆ ಸಾಮಗ್ರಿ ಕದ್ದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರನ್ನ ಶೋಧಕಾರ್ಯ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ