ದಕ್ಷಿಣ ಕನ್ನಡ, ಜು.09: ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ (Kadri Shree Manjunatha Temple)ದಲ್ಲಿ ಯುವಕನೊಬ್ಬ ಹುಚ್ಚಾಟ ಮೆರೆದ ಘಟನೆ ಇಂದು(ಜು.09) ಬೆಳ್ಳಂಬೆಳಿಗ್ಗೆ ನಡೆದಿದೆ. ಹೌದು, ಬೈಕ್ ಚಲಾಯಿಸಿಕೊಂಡು ನೇರ ಕದ್ರಿ ದೇವಸ್ಥಾನದ ಪ್ರಾಂಗಣದ ಒಳಗೆಯೇ ಯುವಕ ಪ್ರವೇಶಿಸಿ, ಬಳಿಕ ದೇವಸ್ಥಾನದಲ್ಲಿ ರಂಪಾಟ ಮಾಡಿದ್ದಾನೆ. ಇನ್ನು ಇದನ್ನೂ ಪ್ರಶ್ನೆ ಮಾಡಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನಂತೆ.
ಇನ್ನು ಅಷ್ಟಕ್ಕೆ ಸುಮ್ಮನಾಗದ ಯುವಕ, ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ ಆರೋಪ ಕೂಡ ಕೇಳಿಬಂದಿದೆ. ನಂತರ ದೈವಸ್ಥಾನದ ಬಳಿ ಇದ್ದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದಾನಂತೆ. ಈ ವೇಳೆ ಸ್ಥಳದಲ್ಲಿದ್ದವರೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಕದ್ರಿ ಠಾಣೆಗೆ ದೇವಸ್ಥಾನದ ಮುಖ್ಯಾಧಿಕಾರಿ ದೂರು ನಿಡಿದ್ದು, ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಈ ಯುವಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಚೂರು ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ
ಇನ್ನು ಈ ಯುವಕನ ಹುಚ್ಚಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಕುರಿತು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಮಾತನಾಡಿ, ‘ಬೆಳಗ್ಗೆ 7:20 ಕ್ಕೆ ಯುವಕನೊಬ್ಬ ಗೇಟ್ ದೂಡಿಕೊಂಡು ಬೈಕ್ನಲ್ಲಿಯೇ ಗರ್ಭಗುಡಿಯ ಆವರಣದ ಒಳಗೆ ಬಂದಿದ್ದಾನೆ. ಅದನ್ನು ನೋಡಿ ಭದ್ರತಾ ಸಿಬ್ಬಂದಿ, ಸಾರ್ವಜನಿಕರು ಹಿಡಿದು ಅವನನ್ನು ನಿಲ್ಲಿಸಿದ್ದಾರೆ. ಆಗ, ಯುವಕ ದೇವಸ್ಥಾನದ ಮೇಲೆ ಹೋಗಿ ದಾಂಧಲೆ ಮಾಡಿದ್ದಾನೆ. ಪೊಲೀಸರಿಗೂ ವಿಷಯ ತಿಳಿಸಿದ್ದು, ಅವರು ಬಂದು ಅವನನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆತನನ್ನು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಅವನ ಬಗ್ಗೆ ನನಗೆ ಮಾಹಿತಿಯಿಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣ್ತಿದ್ದನಂತೆ. ಪೊಲೀಸರು ಈ ಬಗ್ಗೆ ವಿಚಾರಣೆ ಮಾಡಬೇಕು. ಕಳೆದ ಸಾರಿ ಇದ್ದ ಸೆಕ್ಯೂರಿಟಿ ಏಜೆನ್ಸಿ ಚೇಂಜ್ ಮಾಡಿ ಬೇರೆಯವರನ್ನು ಹಾಕಿದ್ದೇವೆ. ದೇವಸ್ಥಾನ ಶುದ್ದೀಕರಣ ಎಲ್ಲಾ ಮಾಡಿದ್ದೇವೆ ಎಂದು ಕದ್ರಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಜಯಮ್ಮ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Tue, 9 July 24