ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್:ಕೋರ್ಟ್‌ನಲ್ಲಿ ಚಿನ್ನಯ್ಯನ ಹೊಸ ಕಥೆ, ಎಸ್ಐಟಿಗೆ ಹೊಸ ತಲೆನೋವು

ಧರ್ಮಸ್ಥಳ ಪ್ರಕರಣ ಸಂಬಂಧ ಬುರುಡೆ ಚಿನ್ನಯ್ಯನ ವಿರುದ್ಧ ತನಿಖೆ ಹಾಗೂ ವಿಚಾರಣೆಯನ್ನು ಬಹುತೇಕ ಮುಕ್ತಾಯಗೊಳಿಸಿರುವ ಎಸ್​ಐಟಿ ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದೆ ಎನ್ನುವರಷ್ಟರಲ್ಲೇ ಪ್ರಕರಣ ಮತ್ತೆ ರೋಚಕ ತಿರುವು ಪಡೆದುಕೊಂಡಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡುವ ಸಂದರ್ಭ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಹೊಸ ಕಥೆ ಹೇಳಿದ್ದಾನೆ. ಇದರಿಂದ ಎಸ್ಐಟಿ ಅಧಿಕಾರಿಗಳಿಗೆ ಮತ್ತೆ ಹೊಸ ತಲೆನೋವಾಗಿ ಪರಿಣಮಿಸಿದೆ. ಹಾಗಾದ್ರೆ, ಚಿನ್ನಯ್ಯ ನ್ಯಾಯಾಲಯದಲ್ಲಿ ಹೇಳಿದ ಹೊಸ ಕಥೆ ಏನು?

ಧರ್ಮಸ್ಥಳ ಕೇಸಿಗೆ ಬಿಗ್ ಟ್ವಿಸ್ಟ್:ಕೋರ್ಟ್‌ನಲ್ಲಿ ಚಿನ್ನಯ್ಯನ ಹೊಸ ಕಥೆ, ಎಸ್ಐಟಿಗೆ ಹೊಸ ತಲೆನೋವು
Dharmasthala Mass Burial Case
Updated By: ರಮೇಶ್ ಬಿ. ಜವಳಗೇರಾ

Updated on: Oct 14, 2025 | 9:36 PM

ಮಂಗಳೂರು, (ಅಕ್ಟೋಬರ್ 14): ಧರ್ಮಸ್ಥಳದಲ್ಲಿ (dharmasthala mass burial Case) ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಹೇಳಿಕೆ ನೀಡಿರುವ ಬುರುಡೆ ಚಿನ್ನಯ್ಯನ ವಿಚಾರಣೆ ಈಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಎಸ್ಐಟಿ ಅಧಿಕಾರಿಗಳ ಮುಂದೆ ಹೇಳದೆ ಇದ್ದ ಶವ ಹೂತ ರಹಸ್ಯವನ್ನು ಚಿನ್ನಯ್ಯ ನ್ಯಾಯಾಲಯದಲ್ಲಿ ಹೇಳಿಕೆ ನೀಡುವ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ (belthangady Court) ತಪ್ಪೊಪ್ಪಿಗೆ ಹೇಳಿಕೆ ನೀಡುವ ವೇಳೆ ಚಿನ್ನಯ್ಯ, ಒಂದೇ ಜಾಗದಲ್ಲಿ ಹತ್ತು ಹೆಣಗಳನ್ನು ಹೂತ ಹೊಸ ಕಥೆಯನ್ನು ಹೇಳಿದ್ದಾನೆ. ಎಸ್ಐಟಿ ವಿಚಾರಣೆ ವೇಳೆ ಈ ಮಾಹಿತಿಯನ್ನು ನೀಡದೆ ಇರುವುದು ಅಧಿಕಾರಿಗಳಿಗೆ ಆಶ್ಚರ್ಯ ತಂದಿದೆ. ಚಿನ್ನಯ್ಯನ ಈ ಹೊಸ ಹೇಳಿಕೆ ಕೇಳಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ಹೊಸ ಮಾಹಿತಿಯ ಹಿನ್ನೆಲೆಯಲ್ಲಿ ಚಿನ್ನಯ್ಯನ ಮತ್ತಷ್ಟು ಹೇಳಿಕೆ ಪಡೆಯಲು ಎಸ್ಐಟಿ ನಿರ್ಧರಿಸಿದೆ.

ಮೊದಲ ದಿನದಿಂದಲೇ ಇಡಿ ಪ್ರಕರಣದ ಹಾದಿ ತಪ್ಪಿಸುವ ರೀತಿಯಲ್ಲೇ ಹೇಳಿಕೆ ಕೊಟ್ಟುಕೊಂಡು ಬಂದಿದ್ದ ಚಿನ್ನಯ್ಯ ಇದೀಗ ಮತ್ತೆ ವರಸೆ ಬದಲಿಸಿದ್ದಾನೆ. ಬೆಳ್ತಂಗಡಿ ಕೋರ್ಟ್‌ನಲ್ಲಿ ಬಿಎನ್ಎಸ್ 183 ಅಡಿ ಹೇಳಿಕೆ ದಾಖಲಿಸಿದ್ದ ವೇಳೆ ಶವ ರಹಸ್ಯದ ಹೊಸ ಕಥೆ ಹೇಳಿದ್ದಾನೆ. ಅಂದರೆ ಒಂದೆ ಜಾಗದಲ್ಲಿ ಹತ್ತು ಹೆಣ ಹೂತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ನಿರ್ದಿಷ್ಟವಾಗಿ ಹತ್ತು ಶವಗಳನ್ನು ಯಾವಾಗ ಮತ್ತು ಎಲ್ಲಿ ಹೂತಿದ್ದು ಎಂಬುದರ ಬಗ್ಗೆ ಚಿನ್ನಯ್ಯ ಸ್ಪಷ್ಟ ಮಾಹಿತಿ ನೀಡಿಲ್ಲ. ಹಾಗಾಗಿ ಈ ಬಗ್ಗೆ ಆಳವಾದ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿರುವುದರಿಂದ ಅಲ್ಲೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಹೇಳಿಕೆಯ ಸತ್ಯಾಸತ್ಯತೆ ಮತ್ತು ಈ ಹಿಂದೆ ನೀಡಿದ ಹೇಳಿಕೆಗೂ ಇದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಲಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅಂತಿಮ ಹಂತ ತಲುಪಿದ ಬುರುಡೆ ಚಿನ್ನಯ್ಯ ಕೇಸ್, ಎಸ್​ಐಟಿ ಚಾರ್ಜ್​​ಶೀಟ್​ ಬಹುತೇಕ ಸಿದ್ಧ

ಇನ್ನೊಂದು ಕಡೆ ಬುರುಡೆ ಪ್ರಕರಣದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಗಿರೀಶ್ ಮಟ್ಟಣ್ಣವರ್ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಆರಂಭವಾಗಿದೆ. ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ರೌಡಿಶೀಟರ್ ಮದನ್ ಬುಗುಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ರೌಡಿಶೀಟರ್ ಮದನ್ ಬುಗುಡಿ ವಕೀಲರ ಜೊತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ.

ಆಗಸ್ಟ್ 30 ರಂದು ಬೆಳ್ತಂಗಡಿ ನಿವಾಸಿ ಪ್ರವೀಣ ಕೆ.ಆರ್. ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಗಿರೀಶ್ ಮಟ್ಟಣ್ಣವರ್ ರೌಡಿಶೀಟರ್ ಆಗಿರುವ ಮದನ್ ಬುಗುಡಿಯನ್ನ ಮಾಧ್ಯಮದ ಮುಂದೆ ‘ಮಾನವ ಹಕ್ಕು ಅಧಿಕಾರಿ’ ಎಂದು ಸುಳ್ಳು ಮಾಹಿತಿ ನೀಡಿ ವಂಚಿಸಿದ್ದಾರೆ. ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕ ತರಲು ಮತ್ತು ಸಮಾಜವನ್ನು ವಂಚಿಸಲು ಯತ್ನಿಸಲಾಗಿದೆ ಎಂದು ದೂರಲಾಗಿತ್ತು. ಅಲ್ಲದೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಾರ್ವಜನಿಕರು ದಂಗೆ ಏಳುವಂತೆ ಪ್ರಚೋದನೆ ನೀಡಿ, ಧಾರ್ಮಿಕ ಭಾವನೆಗಳನ್ನು ಕೆಡಿಸುವ ಉದ್ದೇಶದ ಹೇಳಿಕೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಧರ್ಮಸ್ಥಳ ಪ್ರಕರಣ ಸಂಬಂಧ ಬುರುಡೆ ಚಿನ್ನಯ್ಯನ ವಿರುದ್ಧ ತನಿಖೆ ಹಾಗೂ ವಿಚಾರಣೆಯನ್ನು ಬಹುತೇಕ ಮುಕ್ತಾಯಗೊಳಿಸಿರುವ ಎಸ್​ಐಟಿ ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದ್ದು, ಈ ತಿಂಗಳ ಕೊನೆಯಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದರೊಂದಿಗೆ ಪ್ರಕರಣದ ಒಂದು ಆಯಾಮದ ತನಿಖೆ ಮಹತ್ವದ ಘಟ್ಟಕ್ಕೆ ಬಂತು ಎನ್ನುವಷ್ಟರಲ್ಲೇ ಚಿನ್ನಯ್ಯ ಮತ್ತೊಂದು ಹೊಸ ಕಥೆ ಹುಟ್ಟಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ