AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾಸ್ಕರ ಪರ್ವ: ಮಾಧ್ಯಮ ಲೋಕದ ಧೀಮಂತ ಗುರು ಡಾ. ಭಾಸ್ಕರ ಹೆಗಡೆಗೆ ವಿಶಿಷ್ಟ ಬೀಳ್ಕೊಡುಗೆ, ಸನ್ಮಾನ

ಪತ್ರಿಕೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರಿಗೆ ಜನವರಿ 31ರಂದು ‘ಭಾಸ್ಕರ ಪರ್ವ’ ಕಾರ್ಯಕ್ರಮದ ಮೂಲಕ ವಿಶಿಷ್ಟ ಬೀಳ್ಕೊಡುಗೆ ನೀಡಲಾಗುತ್ತಿದೆ.

ಭಾಸ್ಕರ ಪರ್ವ: ಮಾಧ್ಯಮ ಲೋಕದ ಧೀಮಂತ ಗುರು ಡಾ. ಭಾಸ್ಕರ ಹೆಗಡೆಗೆ ವಿಶಿಷ್ಟ ಬೀಳ್ಕೊಡುಗೆ, ಸನ್ಮಾನ
ಡಾ. ಭಾಸ್ಕರ ಹೆಗಡೆ
TV9 Web
| Edited By: |

Updated on: Jan 29, 2026 | 3:00 PM

Share

ಮಂಗಳೂರು, ಜನವರಿ 29: ಶಿಕ್ಷಣ ಮತ್ತು ಪತ್ರಿಕೋದ್ಯಮ (Journalism) ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ (Dr. Bhaskara Hegde) ಅವರು ಜನವರಿ 31ರಂದು ವೃತ್ತಿ ಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಹಿರಿಯ-ಕಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದ ವತಿಯಿಂದ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 31 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಉಜಿರೆ ಎಸ್​ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

‘ಭಾಸ್ಕರ ಪರ್ವ’ ಕಾರ್ಯಕ್ರಮದಲ್ಲಿ ಏನೇನು?

  • ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಭಾಸ್ಕರ ಹೆಗಡೆ ಕುರಿತಾದ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
  • ಸಾಕ್ಷ್ಯಚಿತ್ರ ಪ್ರದರ್ಶನ: ಡಾ. ಭಾಸ್ಕರ ಹೆಗಡೆ ವೃತ್ತಿ ಜೀವನದ ಸಾಧನೆಗಳನ್ನು ಬಿಂಬಿಸುವ ವಿಶೇಷ ಸಾಕ್ಷ್ಯಚಿತ್ರವನ್ನು ಬೆಂಗಳೂರಿನ ‘ಕ್ಷೇಮವನ’ದ ಕಾರ್ಯನಿರ್ವಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಅವರು ಬಿಡುಗಡೆಗೊಳಿಸಲಿದ್ದಾರೆ.

Bhaskara Parva

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೆ ಪತ್ರಿಕೋದ್ಯಮ ಆಸಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

33 ವರ್ಷಗಳ ಸಾರ್ಥಕ ಪಯಣ

ಡಾ. ಭಾಸ್ಕರ ಹೆಗಡೆ ಪ್ರಾಧ್ಯಾಪಕರಾಗಿ ಮಾತ್ರವಲ್ಲದೆ, ನೂರಾರು ಜನ ಪತ್ರಕರ್ತರನ್ನು ರೂಪಿಸಿದ ಶಿಲ್ಪಿ ಎಂದೇ ಪ್ರಸಿದ್ಧರು. ಅವರ 33 ವರ್ಷಗಳ ಸುದೀರ್ಘ ಸೇವೆಯ ಗೌರವಾರ್ಥವಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ