Kantara Daiva: ವಿವಾದಕ್ಕೀಡಾದ ಯುವತಿ, ಕಾಂತಾರ ಸಿನಿಮಾದ ದೈವದ ದೃಶ್ಯ ರೀಲ್ಸ್ ಮಾಡಿ ಅಪಮೌಲ್ಯ: ಭಕ್ತರು ಕಿಡಿಕಿಡಿ
ಆಕ್ರೋಶ ಹೆಚ್ಚಾದಂತೆ ಎಚ್ಚೆತ್ತುಕೊಂಡ ಯುವತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿದ್ದ ವಿಡಿಯೋವನ್ನು ರಿಮೂವ್ ಮಾಡಿದ್ದಾಳೆ. ಆದ್ರೆ ಈ ವಿಡಿಯೋ ಈಗಾಗಲೇ ವೈರಲ್ ಆಗಿದ್ದು ಖಾತೆಯಿಂದ ವಿಡಿಯೋ ಡಿಲೀಟ್ ಆದರೂ ಯುವತಿಯ ವಿರುದ್ದದ ಆಕ್ರೋಶ ಹಾಗೆ ಇದೆ.
ಕೆಜಿಎಫ್ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾದ ದಾಖಲೆಯನ್ನೇ ಮುರಿದಿರುವ ಕಾಂತಾರ ಸಿನಿಮಾ ಸಿನಿ ಪರದೆ ಮೇಲೆ ಸಖತ್ ಸದ್ದು ಮಾಡ್ತಾನೇ ಇದೆ. ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಟ್ಟಿದ್ದ ದೈವದ ವೇಷ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂತಾರ ಸಿನಿಮಾ ವೀಕ್ಷಣೆ ಬಳಿಕ ಯುವತಿಯೊಬ್ಬಳು ದೈವ ಪಾತ್ರಿಯಂತೆ ವೇಷ ಧರಿಸಿ ದೈವಾರಾಧನೆಯ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದು ಕರಾವಳಿಗರ ಕಣ್ಣು ಕೆಂಪಗಾಗಿಸಿದೆ.
ಪಂಜುರ್ಲಿ ದೈವವನ್ನು ಅನುಕರಿಸಲು ಹೋಗಿ ವಿವಾದಕ್ಕೀಡಾದ ಯುವತಿ
ದೈವಾರಾಧನೆ ಎಂಬುದು ತುಳುನಾಡಿನ ಜನತೆಯ ಪಾಲಿಗೆ ಜೀವಾಳವಿದ್ದಂತೆ. ಆದರೆ ಕಾಂತಾರ ಸಿನಿಮಾವನ್ನು ನೋಡಿದ ಈ ಯುವತಿಯೊಬ್ಬಳು ಥೇಟ್ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದು ಕುಪ್ಪಳಿಸಿ ರೀಲ್ಸ್ ಮಾಡಿದ್ದಾಳೆ. ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿರುವ ಶ್ವೇತಾ ರೆಡ್ಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿ ರೀಲ್ಸ್ ಮಾಡಿದ್ದು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. (ವರದಿ: ಅಶೋಕ್, ಟಿವಿ 9, ಮಂಗಳೂರು)
ಕಾಂತಾರ ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಲು ಯುವತಿ ದೈವಾರಾಧನೆಯನ್ನು ಅಣಕ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಯುವತಿ ವಿರುದ್ದ ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ದೈವಾರಾಧಕರು ಸಿನಿಮಾ ನೋಡಿ ಹುಡುಗಿ ಬಣ್ಣ ಹಚ್ಚಿ ಕಿರೀಟ ಕಟ್ಟಿ ಹುಚ್ಚಾಟ ನಡೆಸಿದ್ದಾಳೆ. ಮೌಲ್ಯಯುತವಾದದನ್ನು ಅಪಮೌಲ್ಯಗೊಳಿಸಿದ್ದಾಳೆ ಎಂದು ಹೇಳಿದ್ದಾರೆ.
ದೈವಾರಾಧನೆ ಆಚರಣೆ ಮಾಡುವುದಕ್ಕೆ ಅದರದ್ದೇ ಆದ ರೀತಿ ರಿವಾಜುಗಳು ಇದೆ. ಆದ್ರೆ ಇದೇ ದೈವಾರಾಧನೆಯನ್ನು ಅಣಕ ಮಾಡಲು ಹೋಗಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ವಿರುದ್ದ ದೂರು ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ. ಈ ರೀತಿ ಮಾಡಿದ್ದಕ್ಕೆ ತಕ್ಕ ಶಾಸ್ತ್ರಿಯಾಗುತ್ತೆ ಎಂಬ ಕಮೆಂಟ್‌ಗಳನ್ನು ನೆಟ್ಟಿಗರು ಹಾಕಿದ್ದಾರೆ. ಆಕ್ರೋಶ ಹೆಚ್ಚಾದಂತೆ ಎಚ್ಚೆತ್ತುಕೊಂಡ ಯುವತಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿದ್ದ ವಿಡಿಯೋವನ್ನು ರಿಮೂವ್ ಮಾಡಿದ್ದಾಳೆ. ಆದ್ರೆ ಈ ವಿಡಿಯೋ ಈಗಾಗಲೇ ವೈರಲ್ ಆಗಿದ್ದು ಖಾತೆಯಿಂದ ವಿಡಿಯೋ ಡಿಲೀಟ್ ಆದರೂ ಯುವತಿಯ ವಿರುದ್ದದ ಆಕ್ರೋಶ ಹಾಗೆ ಇದೆ.
ಕಾಂತಾರ ಸಿನಿಮಾದ ಬಳಿಕ ಸಿನಿಮಾದ ಕೆಲ ವಿಚಾರಗಳನ್ನು ಅಣಕು ಮಾಡುವುದಕ್ಕೆ ಕೆಲ ಮಂದಿ ಮುಂದಾಗಿದ್ದರು. ಹೀಗಾಗಿ ಸ್ವತ ನಟ ರಿಷಬ್ ಶೆಟ್ಟಿ ಈ ರೀತಿ ಯಾರು ಅಣಕು ಮಾಡದಂತೆ ಕೇಳಿಕೊಂಡಿದ್ದರು. ಸದ್ಯ ಇದೀಗ ಯುವತಿ ಈ ರೀತಿ ವೇಷ ಹಾಕಿ ಅಣಕು ಮಾಡಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
Published On - 7:33 pm, Thu, 27 October 22