Mangaluru: ಪಿಹೆಚ್​ಡಿ ಪದವಿ ಪಡೆದ 80ರ ಸಾಧಕ, ಮುಗಿಲು ಮುಟ್ಟಿದ ಚಪ್ಪಾಳೆ

ಬೆಂಗಳೂರಿನ ಐಐಎಸ್ಸಿಯಲ್ಲಿ ಇಂಜಿನಿಯರಿಂಗ್​ ಪದವೀಧರರಾಗಿದ್ದ ಪ್ರಭಾಕರ್ ಕುಪ್ಪಹಳ್ಳಿ​ ಪಿಟ್ಸ್​ಬರ್ಗ್​ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದರು. ಆದರೆ ಪಿಹೆಚ್​​ಡಿ ಸ್ವೀಕರಿಸಬೇಕೆಂಬ ಕನಸೊಂದು ಬಾಕಿ ಉಳಿದಿತ್ತು. ಇದೀಗ ಆ ಕನಸನ್ನು 80ರ ಇಳಿವಯಸ್ಸಿನಲ್ಲಿ ಈಡೇರಿಸಿಕೊಂಡಿದ್ದಾರೆ.

Mangaluru: ಪಿಹೆಚ್​ಡಿ ಪದವಿ ಪಡೆದ 80ರ ಸಾಧಕ, ಮುಗಿಲು ಮುಟ್ಟಿದ ಚಪ್ಪಾಳೆ
ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಿಹೆಚ್​ಡಿ ಪದವಿ ಸ್ವೀಕರಿಸಿದ 80 ವರ್ಷದ ಪ್ರಭಾಕರ್ ಕುಪ್ಪಹಳ್ಳಿ
Follow us
Rakesh Nayak Manchi
|

Updated on:Mar 16, 2023 | 6:58 PM

ಮಂಗಳೂರು: ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತಿದೆ. ಈ ಮಾತನ್ನು ಮಂಡ್ಯ ಜಿಲ್ಲೆಯ ಪ್ರಭಾಕರ ಕುಪ್ಪಹಳ್ಳಿ ಎಂಬವರು ಸಾಬೀತು ಪಡಿಸಿದ್ದಾರೆ. ಪ್ರಭಾಕರ ಕುಪ್ಪಹಳ್ಳಿ ತಮ್ಮ 80 ವರ್ಷದ ಇಳಿ ವಯಸ್ಸಿನಲ್ಲಿ ಮೆಟೀರಿಯಲ್​ ಸೈನ್ಸ್​ ವಿಭಾಗದಲ್ಲಿ ಪಿಹೆಚ್​ಡಿ ಪದವಿ (PhD Degree) ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ (Convocation of Mangalore University) ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪ್ರಭಾಕರ ಅವರಿಗೆ ಪಿಹೆಚ್​ಡಿ ಪದವಿ ಪ್ರದಾನ ಮಾಡಿದರು. ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ವಸ್ತು ವಿಜ್ಞಾನ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಪ್ರಭಾಕರ ಕುಪ್ಪಹಳ್ಳಿ ಪಿಹೆಚ್​ಡಿ ಮಾಡಬೇಕೆಂಬ ಕನಸನ್ನು ಹೊಂದಿದ್ದರು. ಬೆಂಗಳೂರಿನ ಐಐಎಸ್ಸಿಯಲ್ಲಿ ಇಂಜಿನಿಯರಿಂಗ್​ ಪದವೀಧರರಾಗಿದ್ದ ಪ್ರಭಾಕರ್​ ಇಟ್ಸ್​ಬರ್ಗ್​ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದರು. ಆದರೆ ಪಿಹೆಚ್​​ಡಿ ಸ್ವೀಕರಿಸಬೇಕೆಂಬ ಕನಸೊಂದು ಬಾಕಿ ಉಳಿದಿತ್ತು. ಇದೀಗ ಆ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ.

ತಮ್ಮ ಕನಸು ಈಡೇರಿಸಲು ಕಾಲೇಜಿನ ಪ್ರಾಧ್ಯಾಪಕರೊಬ್ಬರು ನೀಡಿದ ಪ್ರೇರಣೆಯಿಂದ ಸ್ಪೂರ್ತಿ ಪಡೆದ ಪ್ರಭಾಕರ್​ 2017ರಲ್ಲಿ ಸಂಶೋಧನೆ ಆರಂಭಿಸಿ ಪೂರ್ಣಗೊಳಿಸಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಂತೆ ಮಂಗಳೂರು ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಪಿಹೆಚ್​ಡಿ ಪದವಿ ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಪುತ್ರನೊಂದಿಗೆ ಆಗಮಿಸಿದ್ದ ಪ್ರಭಾಕರ ಕುಪ್ಪಹಳ್ಳಿ ಪಿಹೆಚ್​ಡಿ ಪದವಿ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಚಪ್ಪಾಳೆ ಮುಗಿಲು ಮುಟ್ಟಿತ್ತು. ಬಹುಕಾಲದ ಕನಸು ನನಸಾಯ್ತು ಎಂಬ ಸಂತಸ ಪ್ರಭಾಕರ ಕುಪ್ಪಹಳ್ಳಿ ಮೊಗದಲ್ಲಿದ್ದರೆ ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬ ಸ್ಪೂರ್ತಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದವರ ಮನಸ್ಸಿನಲ್ಲಿ ಅಚ್ಚೊತ್ತಿತ್ತು.

ಇದನ್ನೂ ಓದಿ: Exam Preparation: ಪರೀಕ್ಷೆ ಎದುರಿಸಬೇಕಾದ ಯುದ್ಧವಲ್ಲ, ಸಂಭ್ರಮಿಸಬೇಕಾದ ಹಬ್ಬ- ಪಿ.ಎನ್ ಭಟ್

ಇನ್ನು ಪ್ರಭಾಕರ ಕುಪ್ಪಹಳ್ಳಿ ಮಾತ್ರವಲ್ಲದೇ 7 ಮಂದಿ ವಿದೇಶಿಗರೂ ಸೇರಿದಂತೆ 115 ಮಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ಪಿಹೆಚ್​ಡಿ ಪದವಿ ಪ್ರಧಾನ ಮಾಡಲಾಯಿತು. 55 ಮಂದಿಗೆ ಚಿನ್ನದ ಪದಕ, 57 ಮಂದಿಗೆ ನಗದು ಬಹುಮಾನ ವಿತರಿಸಲಾಯಿತು. 199 ಮಂದಿ ರ್ಯಾಂಕ್ ವಿಜೇತರಲ್ಲಿ ಪ್ರಥಮ ರ್ಯಾಂಕ್ ಪಡೆದ 71 ಮಂದಿಗೆ ರಾಜ್ಯಪಾಲರು ರ್ಯಾಂಕ್ ಪ್ರಮಾಣ ಪತ್ರ ವಿತರಿಸಿದರು.

ವಿವಿಧ ಸಾಧಕರಿಗೂ ಒಲಿದ ಗೌರವ ಡಾಕ್ಟರೇಟ್

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರಿನ ಕಣಚೂರ್ ಗ್ರೂಪ್ ಆಫ್ ಇಂಡಸ್ಟ್ರೀಸ್​ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಜಿ ಯು.ಕೆ.ಮೋನು, ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ಉದ್ಯಮಿ ಜಿ ರಾಮಕೃಷ್ಣ ಆಚಾರ್ ಹಾಗೂ ಶಿಕ್ಷಣ ಮತ್ತು ಸಮಾಜಸೇವೆಗಾಗಿ ರಾಜ್ಯೋತ್ಸವ ಪುರಸ್ಕಾರ ಪುರಸ್ಕೃತ ಪ್ರೊ.ಎಂ.ಬಿ.ಪುರಾಣಿಕ್ ಅವರು ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಪಡೆದರು.

ವರದಿ: ಅಶೋಕ್, ಟಿವಿ9 ಮಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Thu, 16 March 23