ದಕ್ಷಿಣ ಕನ್ನಡ: ಪುತ್ತೂರು ನಗರಸಭಾ ಸದಸ್ಯ ಆತ್ಮಹತ್ಯೆ, ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗಂಜಿಮಠ ಗ್ರಾಮ ಪಂ. ಸದಸ್ಯ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಸದಸ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ತಮ್ಮ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇಬ್ಬರು ಜನಪ್ರತಿನಿಧಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಘಟನೆ ನಡೆದಿದೆ. ಪುತ್ತೂರು ನಗರಸಭೆ ಸದಸ್ಯ ಶಿವರಾಮ ಸಫಲ್ಯ (Puttur Municipal Council Member Suicide) ಎಂಬವರು ಉರಮಾಲ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ವಾರ್ಡ್ ನಂ.1ರ ಸದಸ್ಯರಾಗಿದ್ದ ಶಿವರಾಮ ಸಫಲ್ಯ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಂತರವಷ್ಟೇ ಆತ್ಮಹತ್ಯೆಯ ಹಿಂದಿನ ಕಾರಣ ತಿಳಿದುಬರಬೇಕಿದೆ. ಸದ್ಯ ಸ್ಥಳಕ್ಕೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ಪುತ್ತೂರು ಟೌನ್ ಪೊಲೀಸರೂ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದೆಡೆ, ಜಿಲ್ಲೆಯ ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮದಲ್ಲಿ 35 ವರ್ಷದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು (Ganjimutt Village Panchayat Member Suicide) ತಮ್ಮ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಂದೀಪ್ ಶೆಟ್ಟಿ ಮೊಗರು ಆತ್ಮಹತ್ಯೆ ಮಾಡಿಕೊಂಡ ಗ್ರಾಮ ಪಂಚಾಯತ್ ಸದಸ್ಯ. ಸ್ಥಳೀಯ ಬಿಜೆಪಿ ಕಾರ್ಯಕರ್ತರಾಗಿದ್ದ ಇವರು ಬುಧವಾರ (ಮಾರ್ಚ್ 15) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಇವರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಆದರೆ ಸಂಜೆ ವೇಳೆ ನೀರುಮಾರ್ಗದಲ್ಲಿರುವ ತಮ್ಮ ಕಚೇರಿಯಲ್ಲಿ ಸಂದೀಪ್ ಶೆಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಕಚೇರಿಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಡೆತ್ನೋಟ್ ವಶಕ್ಕೆ ಪಡೆದಿದ್ದಾರೆ. ಅವಿವಾಹಿತರಾಗಿರುವ ಸಂದೀಪ್ ಶೆಟ್ಟಿ ಮೊಗರು ಅವರು ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಕಚೇರಿಯಿಂದ ಡೆತ್ ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆತ್ಮಹತ್ಯೆ ಸಹಾಯವಾಣಿ: ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 16 March 23