ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರಿಗೆ ಅವಹೇಳನ ಆರೋಪ; ಶಿಕ್ಷಕಿ ವಿರುದ್ದ ಪೊಲೀಸರಿಗೆ ದೂರು ನೀಡಿದ ಪೋಷಕರು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ (Saint Gerosa Educational Institution) ಶ್ರೀರಾಮ (Sri Ram) ದೇವರ ಅವಹೇಳನ ಆರೋಪ ಕೇಳಿಬಂದಿತ್ತು. ಜೊತೆಗೆ ವೈರಲ್ ಆಡಿಯೋ ಸಂದೇಶದ ಮೇರೆಗೆ ಕೆಲವು ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು. ಇದೀಗ ಶಾಲಾ ಶಿಕ್ಷಕಿ ವಿರುದ್ದ ದೂರು ದಾಖಲಾಗಿದೆ.
ದಕ್ಷಿಣ ಕನ್ನಡ, ಫೆ.11: ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ದ ವಿದ್ಯಾರ್ಥಿ ಪೋಷಕರಾದ ಶರತ್ ಕುಮಾರ್ ಎಂಬವವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಹಿಂದೂ ದೇವರ ಮೇಲಿನ ನಂಬಿಕೆ ಹೋಗುವಂತೆ ಕ್ರೈಸ್ತ ಮತವನ್ನು ವೈಭವೀಕರಿಸಿ ಮತಾಂತರಕ್ಕೆ ಪ್ರೇರೇಪಿಸುತ್ತಿರುವ ಕುರಿತು ದೂರು ನೀಡಲಾಗಿದೆ.
ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆಗೆ ನಿರ್ಧಾರ
ಸಿಸ್ಟರ್ ಪ್ರಭಾ ಫೆ.8 ರಂದು “Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡುತ್ತಿದ್ದರು. ಈ ವೇಳೆ ಹಿಂದೂ ಧರ್ಮದ ವಿರುದ್ಧ ಹಿಂದೂ ದೇವರುಗಳ ಬಗ್ಗೆ, ನಮ್ಮ ದೇಶದ ಪ್ರಧಾನಿಗಳ ಬಗ್ಗೆ ಹಾಗೂ ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸಿ, ಹಿಂದೂ ಧರ್ಮವನ್ನು ನಿಂದಿಸಿ, ಹೀಯಾಳಿಸಿ, ತುಚ್ಛವಾಗಿ ಕೆಟ್ಟ ಶಬ್ದಗಳನ್ನು ಪ್ರಯೋಗಿಸಿದ್ದರ ಕುರಿತು ದೂರು ನೀಡಲಾಗಿದ್ದು, ದೂರು ಸ್ವೀಕರಿಸಿದ ಪಾಂಡೇಶ್ವರ ಪೊಲೀಸರು, ಕ್ರಮದ ಭರವಸೆ ನೀಡಿದ್ದಾರೆ. ನಿನ್ನೆ ಜೆರೋಸಾ ಶಾಲೆ ಎದುರು ಮಕ್ಕಳ ಪೋಷಕರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಮೂರು ದಿನಗಳ ಕಾಲ ಶಾಲಾಡಳಿತ ಮಂಡಳಿ ಸಮಯ ಕೇಳಿದ್ದರು. ಆದರೆ, ನಾಳೆ ಮತ್ತೆ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ:ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರಿಗೆ ಅವಹೇಳನ; ಶಾಲೆಗೆ ಮುತ್ತಿಗೆ
ಇನ್ನು ಈ ಘಟನೆ ವಿಚಾರವಾಗಿ ಶಾಲೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರು ಆಡಳಿತ ಮಂಡಳಿ ಜೊತೆ ಮಾತನಾಡಿ ಜೆರೋಸಾ ಶಾಲೆ ಒಳಗಿನಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಲಾಗಿತ್ತು. ಈ ವೇಳೆ ಪೊಲೀಸರು ತಡೆಯಲು ಮುಂದಾದಾಗ ಪೊಲೀಸರ ವಿರುದ್ಧವೇ ಪೋಷಕರು ಹಾಗೂ ಕಾರ್ಯಕರ್ತರು ವಾಗ್ವಾದ ನಡೆಸಿದ್ದರು. ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Sun, 11 February 24