ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದಲ್ಲಿ ನೇತ್ರಾವತಿ ನದಿಯಲ್ಲಿ (Netravati River) ದೋಣಿಯೊಂದು ಮುಳುಗಿದ್ದು, ಮೀನುಗಾರನನ್ನು ಸಮೀಪದ ಜನರು ರಕ್ಷಿಸಿದ್ದಾರೆ. ಬುಧವಾರ ಮಧ್ಯಾಹ್ನ ಹರೇಕಳ-ಅಡ್ಯಾರ್ ಸೇತುವೆ ಬಳಿ ಮೀನುಗಾರಿಕಾ ದೋಣಿ ಮುಳುಗಿದೆ. ಭಾರೀ ಮಳೆಯ ನಂತರ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳವಾಗಿದ್ದು, ನಂತರ ದೋಣಿ ಮುಳುಗಿದೆ ಎಂದು ವರದಿಯಾಗಿದೆ. ಅಕ್ಕಪಕ್ಕದಲ್ಲಿದ್ದವರು ಹಗ್ಗ ಬಳಸಿ ಮೀನುಗಾರನನ್ನು ಮೇಲಕ್ಕೆ ಎಳೆದು ರಕ್ಷಿಸಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದರೂ ಮೀನುಗಾರರು ನದಿಗೆ ಇಳಿದಿದ್ದರು. ಮೀನುಗಾರಿಕಾ ದೋಣಿ ನೀರಿನಲ್ಲಿ ಕೊಚ್ಚಿ ಹೋಗಿದೆ.
ದಕ್ಷಿಣ ಕನ್ನಡದ ಬೆಳ್ಮದ ಬಳಿ ಮೆಸ್ಕಾಂ ಲೈನ್‌ಮ್ಯಾನ್ ವಿದ್ಯುತ್ ಪುನಃಸ್ಥಾಪಿಸಲು ಕುತ್ತಿಗೆ ಮಟ್ಟದ ಆಳದ ನೀರಿನಲ್ಲಿ ಇಳಿದು ಕೆಲಸ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಪ್ರದೇಶದಲ್ಲಿ ಹಲವಾರು ಮನೆಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡ ನಂತರ ವಿದ್ಯುತ್ ಪುನಃಸ್ಥಾಪಿಸಲು ಲೈನ್‌ಮ್ಯಾನ್ ಸಾಹಸ ಮಾಡಿದ್ದಾರೆ.
ಇದನ್ನೂ ಓದಿ: Mangaluru News: ಮಂಗಳೂರಲ್ಲಿ ಗಾಳಿ ಸಹಿತ ಭಾರಿ ಮಳೆ; ಧರೆಗೆ ಉರುಳಿದ ಜಾಹೀರಾತು ಫಲಕ, ಮರ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಬುಧವಾರ ಭಾರೀ ಮಳೆಯಾಗಿದೆ. ಉಡುಪಿಯಲ್ಲಿ ಮಳೆಯ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೆರೆಗೆ ಬಿದ್ದು ದಿವಾಕರ ಶೆಟ್ಟಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಕೊಲ್ಲೂರು ಸಮೀಪದ ಕುಬ್ಜಾ ನದಿಯಲ್ಲಿ ಮುಳುಗಿ ಶೇಷಾದ್ರಿ ಎಂಬ 75 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಂಗಳೂರಿನ ಕೊಟ್ಟಾರದಲ್ಲಿ ಹಲವು ಮನೆಗೆ ಮಳೆ ನೀರು ನುಗ್ಗಿದೆ. ಒಂದು ಮನೆ ಸಂಪೂರ್ಣ ಜಲಾವೃತಗೊಂಡಿದೆ. ನಿವಾಸಿಗಳು ತೀವ್ರ ಪರದಾಡುವಂತಾಗಿದೆ. ಪರಿಣಾಮವಾಗಿ ಮಹಿಳಾ ಕಾರ್ಪೊರೇಟರ್‌ರನ್ನು ನಿವಾಸಿಗಳು ರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದೇವೆ. ಚರಂಡಿಯ ಮೂಲಕ ಹರಿಯಬೇಕಾದ ನೀರು ಮನೆಗೆ ನುಗ್ಗುತ್ತಿದೆ. ಕೆಲಸ ಬಿಟ್ಟು ಮನೆಯಲ್ಲಿ ಉಳಿಯಬೇಕಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Wed, 5 July 23