ಮಂಗಳೂರು: ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿಶೇಷ ಆರ್ಥಿಕ ವಲಯ (Special Economic Zone – SEZ) ವ್ಯಾಪ್ತಿಯ ಮೀನಿನ ಕಾರ್ಖಾನೆಯಲ್ಲಿ ಮೀನು ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸುವಾಗ ಅವಘಡ ಸಂಭವಿಸಿದೆ. ಪಶ್ಚಿಮ ಬಂಗಾಳ ಮೂಲದ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಸೇರಿ ಐವರು ಮೃತಪಟ್ಟಿದ್ದಾರೆ. ಮಿರಾಜುಲ್ ಇಸ್ಲಾಂ, ಸರಾಫತ್ ಆಲಿ, ಅಜನ್ ಆಲಿ, ಕರೀಬ್ಉಲ್ಲಾ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥ ಕಾರ್ಮಿಕರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ದುರಂತ ನಡೆದ ಪ್ರದೇಶವು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.
ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸಲು ಕೆಳಗಿಳಿದ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದ. ಕೂಡಲೇ ಆತನನ್ನು ರಕ್ಷಿಸಲು ಹೋದ 8 ಮಂದಿಯ ಉಸಿರಾಟವೂ ಏರುಪೇರಾಯಿತು. ಕಾರ್ಖಾನೆಗೆ ವಿವಿಧೆಡೆಯಿಂದ ಬರುವ ಮೀನಿನ ತ್ಯಾಜ್ಯವನ್ನು ಈ ಬೃಹತ್ ಟ್ಯಾಂಕ್ನಲ್ಲಿ ಮೊದಲು ಇರಿಸಿ, ಶುದ್ಧೀಕರಿಸಲಾಗುತ್ತಿತ್ತು. ಇದು ಸುಮಾರು 20 ಅಡಿ ಆಳವಾಗಿದೆ.
ಮೀನಿನ ತ್ಯಾಜ್ಯವನ್ನು ಸಂಸ್ಕರಿಸುವಾಗ ಬಳಕೆ ಮಾಡುವ ವಿಷಾನಿಲ ಸೋರಿಕೆಯಿಂದ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿರ್ದಿಷ್ಟವಾಗಿ ಇಂಥದ್ದೇ ಕಾರಣ ಎಂದು ಯಾರೂ ಅಧಿಕೃತವಾಗಿ ಹೇಳುತ್ತಿಲ್ಲ. ಸಮರ್ಪಕ ತನಿಖೆ ನಡೆದು, ಸಂಪೂರ್ಣ ಮಾಹಿತಿ ಹೊರಬರಬೇಕಿದೆ. ಮುಂದಿನ ದಿನಗಳಲ್ಲಿ ಇಂಥ ಅನಾಹುತಗಳು ಮರುಕಳಿಸದಿರಲು ಇತರ ಕಾರ್ಖಾನೆಗಳಲ್ಲಿಯೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ. ಸದ್ಯಕ್ಕೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಯಾವುದೇ ಕೆಲಸ ನಡೆಸಬೇಡಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ: ಮಂಗಳೂರು: ಫಿಶ್ ಮಿಲ್ ಚಿಮಣಿಯಲ್ಲಿ ಹಾರುತ್ತಿದೆ ಸಣ್ಣ ಬೆಂಕಿ ಉಂಡೆಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ
Published On - 9:24 am, Mon, 18 April 22