Mangaluru News: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಣೆ ಮಾಡಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ (Mangalore Rains) ಅಬ್ಬರ ಮುಂದುವರಿದಿದ್ದು, ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬುಧವಾರ ಸಂಜೆ ಸುತ್ತೋಲೆ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಾಳೆಯೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಮುಂದುವರಿಸಲಾಗಿದೆ.
ಈ ಮಧ್ಯೆ, ಮಂಗಳೂರಿನಲ್ಲಿ ಮಳೆ ಆರ್ಭಟಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗಿದೆ. ಮೃತ ಸುರೇಶ್ ಗಟ್ಟಿ ನಿವಾಸಕ್ಕೆ ತಹಶೀಲ್ದಾರ್ ಪ್ರಭಾಕರ್ ಭೇಟಿ ನೀಡಿ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸುರೇಶ್ ಪತ್ನಿ ಶಾಂಭ ಅವರಿಗೆ ಪರಿಹಾರ ಚೆಕ್ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Mangaluru News: ನೇತ್ರಾವತಿ ನದಿಯಲ್ಲಿ ಮುಳುಗಿದ ಬೋಟ್; ಮೀನುಗಾರನ ರಕ್ಷಣೆ
ಮಂಗಳೂರು ಹೊರವಲಯದ ಪಿಲಾರು ಬಳಿ ಸುರೇಶ್ ಗಟ್ಟಿ ಮೃತಪಟ್ಟಿದ್ದರು. ಮನೆ ಸಮೀಪ ಕಾಲು ಸಂಕ ದಾಟುವಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದರು.
ಉಡುಪಿ ಜಿಲ್ಲೆಯಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು, ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ. ಗುರುವಾರವೂ ಮಳೆ ಮುಂದುವರಿಯುವ ಸೂಚನೆ ಹಿನ್ನೆಲೆ ರಜೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Wed, 5 July 23