ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮಳೆ (Dakshina Kannada Rain) ಆರ್ಭಟ ಮುಂದುವರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಶಾಂಭವಿ ನದಿಯಲ್ಲಿ ನೀರು ಹೆಚ್ಚುತ್ತಿದ್ದು, ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶವು ಪ್ರತಿ ವರ್ಷದಂತೆ ಈ ಬಾರಿಯೂ ಜಲಾವೃತಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಇದರಿಂದಾಗಿ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಇನ್ನೊಂದೆಡೆ, ಕಾರ್ಣಿಕ ಬಪ್ಪನಾಡು ದೇವಸ್ಥಾನಕ್ಕೆ ಜಲ ದಿಗ್ಬಂಧನವಾಗಿದೆ.
ಪುತ್ತೂರಿನಿಂದ ಪಾಣಾಜೆಯಾಗಿ ಕಾಸರಗೋಡು ಜಿಲ್ಲೆಯ ಪೆರ್ಲ ಸಂಪರ್ಕಿಸುವ ರಸ್ತೆಯಲ್ಲಿರುವ ಚೇಳ್ಯಡ್ಕ ಸೇತುವೆ ಜಲಾವೃತಗೊಂಡಿದೆ. ಮಳೆಗಾಲ ಸಂದರ್ಭದಲ್ಲಿ ಪ್ರತಿ ಬಾರಿ ಈ ಸೇತುವೆ ಮುಳುಗಡೆಯಾಗುತ್ತದೆ. ಆದರೆ ಈ ಬಾರಿ ಮೊದಲ ಮಳೆಗೇ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್ ಪರಿಶೀಲನೆ ನಡೆಸಿದ್ದಾರೆ. ಕಾಸರಗೋಡು ಜಿಲ್ಲೆ ಸೇರಿದಂತೆ ಹಲವು ಗ್ರಾಮದ ಸಂಪರ್ಕ ಸೇತುವೆ ಇದಾಗಿದ್ದು, ಜನರು ಪರ್ಯಾಯ ರಸ್ತೆ ಬಳಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಗಾಳಿ ಸಹಿತ ಭಾರೀ ಮಳೆ: ಕುಸಿದ ಶಾಲೆ ಮೇಲ್ಛಾವಣಿ, ರಜೆ ಇದ್ದಿದ್ದರಿಂದ ತಪ್ಪಿದ ಅನಾಹುತ
ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶದ ಮೂಲಕ ಹರಿಯುವ ಶಾಂಭವಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಜಲಾವೃತಗೊಂಡು ಮನೆ ಮುಳುಗಬಹುದು ಎಂಬ ಆಂತಕದಲ್ಲಿ ಅಲ್ಲಿನ ಜನರು ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಊರಿನ ಜನರು ಮಾತನಾಡಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಗ್ರಾಮದ 50 ಕ್ಕೂ ಅಧಿಕ ಮನೆಗಳು ಅಪಾಯದಲ್ಲಿ ಇವೆ. ಶಾಲೆಗೆ ರಜೆ ಕೊಟ್ಟಿರುವ ಹಿನ್ನೆಲೆ ಮಕ್ಕಳು ಮನೆಯಲ್ಲೇ ಇದ್ದಾರೆ. ಸದ್ಯ ಮಕ್ಕಳು ಹಾಗೂ ಹೆಂಗಸರು ಹೊರಗೆ ಬರಲು ಆಗುತ್ತಿಲ್ಲ. ಪ್ರತೀ ವರ್ಷ ಈ ಭಾಗದಲ್ಲಿ ನಮಗೆ ನೆರೆಯ ಆತಂಕ ಇದೆ. ಸದ್ಯ ನೀರು ಹೆಚ್ಚಾಗುತ್ತಿದ್ದು, ಮನೆ ಖಾಲಿ ಮಾಡುತ್ತಿದ್ದೇವೆ. ವಸ್ತುಗಳನ್ನು ಸಾಗಿಸಲು ಇದಕ್ಕೆ ದೋಣಿ ವ್ಯವಸ್ಥೆ ಆಗಬೇಕು ಎಂದು ಹೇಳಿದ್ದಾರೆ.
ಶಾಂಭವಿ ನದಿ ಪಕ್ಕದಲ್ಲೇ ಇರುವ ಕಾರ್ಣಿಕ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜಲ ದಿಗ್ಬಂಧನವಾಗಿದ್ದು, ದೇವಾಲಯದ ಒಳ ಭಾಗದಲ್ಲಿ ಮೊಣ ಕಾಲುದ್ದಕ್ಕೂ ನೆರೆ ನೀರು ತುಂಬಿದೆ. ಅದಾಗ್ಯೂ, ಭಕ್ತರು ನೆರೆ ನೀರಿನಲ್ಲಿ ನಿಂತುಕೊಂಡು ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಸುಳ್ಯ ತಾಲೂಕಿನಲ್ಲಿ ನಿರಂತವಾಗಿ ಮಳೆಯಾಗುತ್ತಿದ್ದು, ಕಲ್ಲಪ್ಪಳ್ಳಿ ಬಳಿ ರಸ್ತೆ ಮೇಲೆ ಗುಡ್ಡ ಕುಸಿತಗೊಂಡು ಸಂಚಾರ ಅಸ್ತವ್ಯಸ್ಥಗೊಂಡಿದೆ. ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.
ವರದಿ: ಪೃಥ್ವಿರಾಜ್ ಮತ್ತು ಅಶೋಕ್, ಮಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Thu, 6 July 23