ಮಂಗಳೂರು: MBBS ಸೀಟ್ ಹೆಸರಿನಲ್ಲಿ ಅಕ್ರಮ ಪ್ರಕರಣ, ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು
ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು ಹೆಸರಿನಲ್ಲಿ ಸರ್ಕಾರದ ಅನುಮತಿಯನ್ನೇ ಪಡೆಯದೆ ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚಿಸಿದೆ. ಈ ನಡುವೆ ಪೋಷಕರೊಂದಿಗೆ ಕಾಲೇಜಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು, ಸೆ.4: ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು ಹೆಸರಿನಲ್ಲಿ ಸರ್ಕಾರದ ಅನುಮತಿಯನ್ನೇ ಪಡೆಯದೆ ನೂರಾರು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ (Medical Seat) ಮಾರಾಟ ಮಾಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚಿಸಿದೆ. ಈ ನಡುವೆ ಪೋಷಕರೊಂದಿಗೆ ಕಾಲೇಜಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ನೀರುಮಾರ್ಗದಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ಗಣೇಶ್ ರಾವ್ ಮಾಲೀಕತ್ವದ ಜಿ.ಆರ್.ಮೆಡಿಕಲ್ ಕಾಲೇಜಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಅಕ್ರಮದಿಂದ ಲಕ್ಷಾಂತರ ಶುಲ್ಕ ತೆತ್ತು ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅನುಮತಿ ಇಲ್ಲದೇ ಸೀಟು ನೀಡಿರುವುದು ಅಕ್ರಮ ಮತ್ತು ಕಾನೂನು ಬಾಹಿರ ಎಂದು ವರದಿಯಾಗಿದೆ. 2022-23 ಸಾಲಿಗೆ 150 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ದಾಖಲಾತಿ ಮಾಡಿಕೊಂಡಿದ್ದರು. 2021-22ರಲ್ಲಿ ಎಂಎಆರ್ಬಿ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು.
ಇದನ್ನೂ ಓದಿ: ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟ್ ಅಕ್ರಮ; ಜಿ.ಆರ್.ಮೆಡಿಕಲ್ ಕಾಲೇಜು ವಿರುದ್ಧ ಗಂಭೀರ ಆರೋಪ
ಆದರೆ 2022ರ ಸೆಪ್ಟೆಂಬರ್ನಲ್ಲಿ ಎಂಎಆರ್ಬಿ ತಂಡ ಕಾಲೇಜಿನಲ್ಲಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಾಲೇಜಿನಲ್ಲಿ ರಿಸರ್ಚ್ ಸೆಂಟರ್ ಅಗತ್ಯ ಮಾನದಂಡ ಮತ್ತು ನುರಿತ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಎರಡನೇ ಬ್ಯಾಚ್ನಲ್ಲಿ MBBS ದಾಖಲಾತಿಗೆ ಅವಕಾಶ ನೀಡಿರಲಿಲ್ಲ. ಹೀಗಿದ್ದರೂ ಕಾನೂನು ಬಾಹಿರವಾಗಿ ಕೋಟ್ಯಾಂತರ ರೂ. ಶುಲ್ಕ ಪಡೆದು 150 ಮಂದಿಗೆ ಸೀಟು ಹಂಚಿಕೆ ಮಾಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಎರಡು ಬಾರಿ ಸೂಚಿಸಿತ್ತು. ಅಲ್ಲದೆ, ಇದನ್ನು ಇಲಾಖೆ ನಿರ್ಲಕ್ಷ್ಯಿಸಿದ ಹಿನ್ನೆಲೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಇದೀಗ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೂ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳೂ ಪರೀಕ್ಷೆ ಕಟ್ಟಲಾಗದೇ ಅತಂತ್ರರಾಗಿದ್ದಾರೆ. ಆ ಮೂಲಕ ವೈದ್ಯರಾಗುವ ಕನಸು ಹೊತ್ತ ನೂರಾರು ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ. ಹೀಗಾಗಿ ಕಾಲೇಜು ಮುಖ್ಯಸ್ಥ ಗಣೇಶ್ ರಾವ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು, ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಭದ್ರತೆ ಕಲ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Mon, 4 September 23