ದಕ್ಷಿಣ ಕನ್ನಡ: ಮಸೀದಿ ನಿರ್ಮಾಣಕ್ಕೆ ಮರ ಮಟ್ಟು ನೀಡಿದ ಹಿಂದೂ ಬಾಂಧವರು, ಸೌಹಾರ್ದತೆ ಸಾರಿದ ನವೀಕೃತ ಜುಮ್ಮಾ ಮಸೀದಿ

|

Updated on: Mar 29, 2023 | 9:05 AM

ದಕ್ಷಿಣ ಕನ್ನಡ ಜಿಲ್ಲೆ ಅಂದಾಕ್ಷಣ ಕೋಮುಸೂಕ್ಷ್ಮ ಪ್ರದೇಶ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಹೌದು ಈ ಕೋಮು ಸಂಘರ್ಷದ ನಡುವೆ ಇಲ್ಲಿ ಕೋಮು ಸೌಹಾರ್ದತೆಯನ್ನು ಬೆಳೆಸುವಂತಹ ಸಂಗತಿಗಳು ಸಹ ಜರುಗುತ್ತೆ. ಅದಕ್ಕೆ ಸಾಕ್ಷಿಯಾಗಿ ಒಂದು ಮಸೀದಿಯ ನವೀಕರಣಕ್ಕೆ ಹಿಂದೂ ಬಾಂಧವರು ಕೈ ಜೋಡಿಸಿದ್ದಾರೆ.

ದಕ್ಷಿಣ ಕನ್ನಡ: ಮಸೀದಿ ನಿರ್ಮಾಣಕ್ಕೆ ಮರ ಮಟ್ಟು ನೀಡಿದ ಹಿಂದೂ ಬಾಂಧವರು, ಸೌಹಾರ್ದತೆ ಸಾರಿದ ನವೀಕೃತ ಜುಮ್ಮಾ ಮಸೀದಿ
ಮಸೀದಿ ನಿರ್ಮಾಣಕ್ಕೆ ಹಿಂದೂ ಧರ್ಮದವರೂ ಸಹಾಯ ಮಾಡುವ ಮೂಲಕ ಸೌಹಾರ್ಧಯತೆಗೆ ಸಾಕ್ಷಿಯಾದ ಮಸೀದಿ
Follow us on

ದಕ್ಷಿಣ ಕನ್ನಡ: ಇದು ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲರಪಟ್ಟಣದ ಮೊಹಿಯದ್ದೀನ್ ಜುಮ್ಮಾ ಮಸೀದಿ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ಮಸೀದಿ ಸೌಹಾರ್ದತೆಯ ಕೇಂದ್ರ ಬಿಂದುವಾಗಿದೆ. ಇಲ್ಲಿ ಮುಸ್ಲಿಂ, ಹಿಂದೂ, ಕ್ರೈಸ್ಥ ಎಂಬ ಭೇದವಿಲ್ಲದೆ ಮಸೀದಿ ನವೀಕರಣ ಕಾರ್ಯದಲ್ಲಿ ಎಲ್ಲರೂ ಒಟ್ಟು ಸೇರಿದ್ದಾರೆ. ಈ ಮಸೀದಿಯ ನವೀಕರಣ ಕಾರ್ಯವನ್ನು ಊರವರು ಸೇರಿ ಅಳಿಲ ಸೇವೆ ಮಾಡುವ ಮೂಲಕ ನಿರ್ಮಿಸಿದ್ದಾರೆ. ವಿಶೇಷ ಅಂದರೆ ಈ ಮಸೀದಿಯ ಸುಂದರ ಕೆತ್ತನೆಯ ಮೂಲಕ ಮಸೀದಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದವರು ಹಿಂದೂ ಶಿಲ್ಪಿ ರತ್ನಾಕರ್. ಮರದ ಕೆತ್ತನೆಯಲ್ಲಿ ನುರಿತರಾಗಿರುವ ರತ್ನಾಕರ್ ಅವರು ಅಳುಕಿನಿಂದಲೇ ಆರಂಭಿಸಿದ ಕೆತ್ತನೆ ನಿರೀಕ್ಷೆಗೂ ಮೀರಿ ಸುಂದರವಾಗಿ ಮೂಡಿ ಬಂದಿದೆ.

ಮಸೀದಿ ನಿರ್ಮಾಣಕ್ಕೆ ಅದೆಷ್ಟೋ ಮರಮುಟ್ಟುಗಳನ್ನು ಊರವರು ನೀಡಿದ್ದರು. ಅದರಲ್ಲೂ ಹಿಂದೂಗಳೂ ಹಲಸಿನ ಮರ, ಸಾಗವಾನಿ ಮರಗಳನ್ನು ನೀಡಿ ಸೌಹರ್ದತೆ ಮೆರೆದಿದ್ದಾರೆ. ಇದರ ಜೊತೆಗೆ ಮಸೀದಿ ನವೀಕರಣ ಕಾರ್ಯ ಪೂರ್ಣಗೊಂಡು ಮಸೀದಿ ಉದ್ಘಾಟನೆಯ ದಿನ ನೋಡ ಬನ್ನಿ ನಮ್ಮೂರ ಮಸೀದಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಸೀದಿಯ ಸುಂದರ ಕೆತ್ತನೆ ನೋಡಲು ಹಿಂದೂ, ಮುಸ್ಲಿ, ಕ್ರ್ರೈಸ್ತರೆನ್ನದೇ ಎಲ್ಲ ಸಾರ್ವಜನಿಕರು ಆಗಮಿಸಿದ್ದರು. ನೂತನ ಮಸೀದಿಯ ಸೌಂದರ್ಯ ನೋಡಿ ಕಣ್ತುಂಬಿಕೊಂಡರಲ್ಲದೇ ಈ ಸೌಂದರ್ಯವನ್ನು ತಮ್ಮ ಮೊಬೈಲ್‌ನಲ್ಲೂ ಸೆರೆಹಿಡಿಯುವ ದೃಶ್ಯಗಳು ಕಂಡುಬಂದವು. ಇನ್ನು ಇದೇ ವೇಳೆ ಮಸೀದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಲ್ಪಿ ರತ್ನಾಕರ್​ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ:ಐತಿಹಾಸಿಕ ಬೇಲೂರಿನ ಜಾತ್ರೆಯಲ್ಲಿ ಮತ್ತೆ ಶುರುವಾದ ಧರ್ಮ ಸಂಘರ್ಷ; ದೇವಾಲಯದಲ್ಲಿ ಕುರಾನ್​ ಪಠಣ ವಿರೋಧ

ಒಟ್ಟಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸೌಹಾರ್ದತೆ ಕದಡುತ್ತಿರುವ ಕಡಲನಗರಿಯಲ್ಲಿ ಇಂತಹ ಸಾಮರಸ್ಯದ ನಿದರ್ಶನಗಳು ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದರಲ್ಲಿ ಯಾವುದೇ ಸಂಶಯವಿಲ್ಲ.

ವರದಿ: ಅಶೋಕ್ ಟಿವಿ9 ಮಂಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Wed, 29 March 23