ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕಾರಿಂಜ (Karinja) ತಾಣವನ್ನು ಶೀಘ್ರ ಪರಿಸರ ಸೂಕ್ಷ್ಮ ಪ್ರದೇಶ (Eco Sensitive) ಎಂದು ಘೋಷಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ (V Sunil Kumar) ಘೋಷಿಸಿದರು. ಕಾರಿಂಜೇಶ್ವರ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಉತ್ತಮ ಪರಿಸರವನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ಬಂಟ್ವಾಳ ಕ್ಷೇತ್ರದ ಶಾಸಕ ಯು.ರಾಜೇಶ್ ನಾಯಕ್ ಅವರೊಂದಿಗೆ ಕಾರಿಂಜಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಅವರು ಜನರೊಂದಿಗೆ ಬೆರೆತು ಮಾತನಾಡಿದರು. ಈ ವೇಳೇ ಸಾರ್ವಜನಿಕರು ಮತ್ತು ಭಕ್ತರು ದೇಗುಲಕ್ಕೆ ಕಲ್ಲುಕ್ವಾರಿಗಳಿಂದ ಅಪಾಯ ಇರುವ ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಕಲ್ಲುಗಣಿಗಾರಿಕೆ ಇದೇ ರೀತಿ ಮುಂದುವರಿದರೆ ದೇಗುಲವು ನಾಶವಾಗಬಹುದು, ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದರು.
ಕಾರಿಂಜ ಪರಿಸರಕ್ಕೆ ಇರುವ ಆತಂಕದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಸರ್ಕಾರವು ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡ ನಂತರ ಅಗತ್ಯ ಕ್ರಮ ಜರುಗಿಸಲಿದೆ. ಈ ತಾಣವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಮುಖ್ಯಮಂತ್ರಿ ಸಹ ಒಲವು ತೋರಿದ್ದಾರೆ ಎಂದು ಹೇಳಿದರು.
ಕಲ್ಲುಗಣಿಗಳಿಂದಾಗಿ ದೇಗುಲಕ್ಕೆ ಧಕ್ಕೆಯಾಗುತ್ತಿದೆ ಎಂದು ಹಲವು ದೂರುಗಳು ಬಂದಿವೆ. ಇದಕ್ಕೆ ಕಡಿವಾಣ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ದೇಗುಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ನುಡಿದರು. ದೇಗುಲಕ್ಕೆ ಭೇಟಿ ನೀಡುವ ಮೊದಲು ಅವರು ಮಾಡಾವು-ಸುಳ್ಯ 110 ಕೆವಿ ವಿತರಣಾ ಜಾಲ ಹಾಗೂ ಸಬ್ಸ್ಟೇಷನ್ಗೆ ಚಾಲನೆ ನೀಡಿದು. ಈ ಯೋಜನೆಯನ್ನು ₹ 46 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಂಡಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಜಾಗತಿಕ ಸಂಚು: ಸಚಿವ ಸುನಿಲ್ ಕುಮಾರ್
ದಕ್ಷಿಣ ಕನ್ನಡ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Thu, 12 January 23