ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಜಾಗತಿಕ ಸಂಚು: ಸಚಿವ ಸುನಿಲ್ ಕುಮಾರ್

ಮಂಗಳೂರಿನಲ್ಲಿ ಇಂದಲ್ಲ ನಾಳೆ ಎನ್​ಐಎ ಘಟಕ ಸ್ಥಾಪಿಸಲಾಗುವುದು. ಕೇಂದ್ರ ಸರ್ಕಾರವೂ ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸುತ್ತಿದೆ ಎಂದರು.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಜಾಗತಿಕ ಸಂಚು: ಸಚಿವ ಸುನಿಲ್ ಕುಮಾರ್
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಸ್ಥಳಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 25, 2022 | 12:25 PM

ಮಂಗಳೂರು: ಕಂಕನಾಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಸಂಚು ಇರುವ ಗುಮಾನಿಯಿದೆ. ತನಿಖೆಯ ಹೊಣೆಯನ್ನು ಈಗಾಗಲೇ ‘ರಾಷ್ಟ್ರೀಯ ತನಿಖಾ ದಳ’ಕ್ಕೆ (National Investigation Agency – NIA) ಹಸ್ತಾಂತರಿಸಲಾಗಿದೆ. ಘಟನೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರವು ಪ್ರಯತ್ನಿಸುತ್ತಿದೆ. ಉಗ್ರರ ಸಂಚುಗಳನ್ನು ವಿಫಲಗೊಳಿಸಲಾಗುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುವ ಅವರ ಪ್ರಯತ್ನ ವಿಫಲವಾಗಿದೆ. ತನಿಖೆ ದೃಷ್ಟಿಯಿಂದ ಗೃಹಸಚಿವರು ಮೊದಲು ಭೇಟಿ ನೀಡಿದ್ದಾರೆ ಎಂದು ಮಂಗಳೂರಿನ ನಾಗುರಿಯಲ್ಲಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.

ಮಂಗಳೂರಿನಲ್ಲಿ ಇಂದಲ್ಲ ನಾಳೆ ಎನ್​ಐಎ ಘಟಕ ಸ್ಥಾಪಿಸಲಾಗುವುದು. ಕೇಂದ್ರ ಸರ್ಕಾರವೂ ಈ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲನೆ ನಡೆಸುತ್ತಿದೆ. ದೇಶದ ಯಾವುದೇ ಭಾಗದಲ್ಲಿ ಇಂಥ ವಾತಾವರಣ ಸೃಷ್ಟಿಯಾಗಬಾರದು ಬಾಂಬ್ ಸ್ಪೋಟದ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಭಯೋತ್ಪಾದನೆಯ ಆತಂಕವನ್ನು ಸರ್ಕಾರವು ಸದೃಢವಾಗಿ ಎದುರಿಸುತ್ತಿದೆ. ಭಯೋತ್ಪಾದಕರ ಬಗ್ಗೆ ನಮ್ಮ ಸರ್ಕಾರವು ಎಂದಿಗೂ ಮೃದು ಧೋರಣೆ ತಳೆದಿಲ್ಲ ಎಂದರು.

ಕದ್ರಿ ದೇವಸ್ಥಾನ, ಕೆಲವು ಕಚೇರಿ ಹಾಗೂ ಸಾರ್ವಜನಿಕ ಜಾಗಗಳನ್ನು ಉಗ್ರರು ಗುರಿಯಾಗಿಸಿದ್ದರು. ಹಿಂದೂ ಸಮಾಜವನ್ನು ಗುರಿಯಾಗಿಸಿ ದಾಳಿ ಮಾಡುವ ಅವರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇಂಥ ಮಾನಸಿಕತೆಯೂ ಎಲ್ಲರಿಂದಲೂ ದೂರ ಆಗಬೇಕಿದೆ. ಈ ಬೆಳವಣಿಗೆಗಳನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಉಗ್ರರಿಗೆ ಸಹಕಾರ ಕೊಡುವವರ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು ಎಂದು ಕರೆ ನೀಡಿದರು.

ನೆಟ್ಟಾರು ಘಟನೆ, ಎಸ್​ಡಿಪಿಐ ಉಪಟಳ ಸೇರಿದಂತೆ ಸಮಾಜದಲ್ಲಿ ಶಾಂತಿ ಕದಡುವ ಎಲ್ಲ ಪ್ರಯತ್ನಗಳನ್ನೂ ಜನರು ವಿರೋಧಿಸುತ್ತಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಅಟೊ ಚಾಲಕ‌ನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು. ಗಾಯಾಳು ಆಟೊ ಚಾಲಕ ಪುರುಷೋತ್ತಮ್ ಚಿಕಿತ್ಸೆ ಪಡೆಯುತ್ತಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಸಚಿವರ ಜೊತೆಗಿದ್ದರು. ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿದ ನಾಗೂರಿ ಸ್ಥಳಕ್ಕೂ ಅವರು ಭೇಟಿ ನೀಡಿ ಪರಿಶೀಲಿಸಿದರು.

ಕದ್ರಿ ದೇಗುಲಕ್ಕೆ ಹೆಚ್ಚಿನ ಭದ್ರತೆ ಒದಗಿಸಲು ವಿನಂತಿ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹೊಣೆಹೊತ್ತು ಐಆರ್​ಸಿ ಸಂಘಟನೆಯು ನೀಡಿರುವ ಮಾಧ್ಯಮ ಹೇಳಿಕೆಯಲ್ಲಿ ದೇಗುಲಗಳಿಗೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ, ಕದ್ರಿ ದೇವಸ್ಥಾನಕ್ಕೆ ಹೆಚ್ಚುವರಿ ಭದ್ರತೆ ಒದಗಿಸುವಂತೆ ಕದ್ರಿ ಪೊಲೀಸ್ ಠಾಣೆಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ದೂರು ನೀಡಿದ್ದಾರೆ. ಐಆರ್​​ಸಿ ಮಾಡಿರುವ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಲಾಗಿದೆ.

ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಕದ್ರಿ ದೇವಸ್ಥಾನದ ಮೇಲೆ ಬಾಂಬ್ ಬೆದರಿಕೆ ಹಾಕಿದೆ.. ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ. ಅಲ್ಲದೇ ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಅವರು ವಿನಂತಿಸಿದ್ದಾರೆ.

Published On - 12:25 pm, Fri, 25 November 22