ಪುತ್ತೂರಿನಲ್ಲಿ ಯುವಕನ ಅನುಮಾನಾಸ್ಪದ ಸಾವು; ಮೃತನ ತಾಯಿ ಸೇರಿದಂತೆ ಮೂವರು ವಶಕ್ಕೆ
ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ(Puttur) ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೃತದೇಹ ನೋಡಿ ಅನುಮಾನಗೊಂಡ ಪೋಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ, ಮೇ.10: ಪುತ್ತೂರಿನ(Puttur) ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೇತನ್ (33) ಸಾವನ್ನಪ್ಪಿದ ಯುವಕ. ಚೇತನ್ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಮೃತನ ತಾಯಿ ಪೋಲೀಸರಿಗೆ ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮೃತದೇಹ ನೋಡಿ ಅನುಮಾನಗೊಂಡ ಪೋಲೀಸರು, ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಮೃತನ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ರಾತ್ರಿ ಕುಡಿದು ಬಂದು ತಾಯಿ ಜೊತೆ ಜಗಳ
ಇನ್ನು ನಿನ್ನೆ(ಮೇ.09) ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್, ತಾಯಿ ಜೊತೆ ಜಗಳವಾಡಿ ಮನೆ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಕುರಿತು ಯೂಸುಫ್, ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬಳಿಕ ಯೂಸುಫ್ ಮನೆಗೆ ಬಂದ ಚೇತನ್ ತಾಯಿ, ನಾಯಿಯನ್ನು ಕಟ್ಟುವ ಸಂಕೊಲೆಯನ್ನು ತಂದು ಚೇತನ್ ಸೊಂಟಕ್ಕೆ ಹಾಕಿ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಮನೆಗೆ ಎಳೆದೊಯ್ದಿದ್ದರು.
ಇದನ್ನೂ ಓದಿ:ಶಿವಮೊಗ್ಗ ಗ್ಯಾಂಗ್ವಾರ್ನಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಸಾವು, ಸಾವಿನ ಸಂಖ್ಯೆ 3ಕ್ಕೆ ಏರಿಕೆ
ಈ ವೇಳೆ ಆತನನ್ನು ಎಳೆಯುವ ಸಮಯದಲ್ಲಿ ಕುತ್ತಿಗೆಗೆ ಸುತ್ತಿಕೊಂಡಿದ್ದ ಸಂಕೋಲೆ ಬಿಗಿದು ಚೇತನ್ ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಶವಪರೀಕ್ಷೆಯಾಗಿ ಮೃತದೇಹವನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ. ಈ ಕುರಿತು ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಬೆಂಕಿ
ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗಾಬರಿಯಿಂದ ಸಿಬ್ಬಂದಿಗಳು ಬ್ಯಾಂಕ್ನಿಂದ ಹೊರಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ. ಇನ್ನು ಬಿಂಕಿಯಿಂದ ಅಪಾರ ಪ್ರಮಾಣದ ಹೊಗೆ ಬ್ಯಾಂಕ್ನ್ನು ಆವರಿಸಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ