Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾರ್ಮಾಡಿ ಘಾಟಿಯ 34 ಕಡೆಗಳಲ್ಲಿ ಭೂ ಕುಸಿತ ಭೀತಿ: ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್​

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಪ್ರವಾಹ ಸಾಧ್ಯತೆಯ 63 ಮತ್ತು ರಸ್ತೆ ಸೇರಿದಂತೆ ಭೂ ಕುಸಿತ ಸಾಧ್ಯತೆಯ 87 ಜಾಗಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 34 ಜಾಗಗಳು ಚಾರ್ಮಾಡಿ ಘಾಟ್​​​ನಲ್ಲೇ ಇದೆ ಎಂದಿದ್ದಾರೆ.

ಚಾರ್ಮಾಡಿ ಘಾಟಿಯ 34 ಕಡೆಗಳಲ್ಲಿ ಭೂ ಕುಸಿತ ಭೀತಿ: ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್​
ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​​
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Jul 28, 2023 | 3:30 PM

ಮಂಗಳೂರು, ಜುಲೈ 28: ಚಾರ್ಮಾಡಿ ಘಾಟಿ (charmadi ghat) ಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ, ಪ್ರಾಕೃತಿಕ ವಿಕೋಪ ವಿಚಾರವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಸಾಧ್ಯತೆಯ 63 ಜಾಗಗಳು ಮತ್ತು ರಸ್ತೆಗಳು ಸೇರಿದಂತೆ ಭೂ ಕುಸಿತ ಸಾಧ್ಯತೆಯ 87 ಜಾಗಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ರೆಡ್ ಅಲರ್ಟ್ ಇರುವ ರಸ್ತೆಗಳಲ್ಲಿ ಪ್ರಯಾಣ ಸೂಕ್ತವಲ್ಲ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸದ್ಯ ನಾಲ್ಕು ದಾರಿಯಿದ್ದು, ಇದರಲ್ಲಿ ಎರಡು ದಾರಿ ಬಂದ್ ಆಗಿದೆ. ಹೀಗಾಗಿ ಆದಷ್ಟು ಕುಕ್ಕೆ ಸುಬ್ರಹ್ಮಣ್ಯ ಪ್ರವಾಸ ಮುಂದೂಡಿ. ಹೊರಗಿನ ಪ್ರವಾಸಿಗರು ಅಪಾಯಕಾರಿ ಜಲಪಾತ, ನೀರಿಗೆ ಇಳಿಯುವಂತ್ತಿಲ್ಲ. ದೇವಸ್ಥಾನ ಭೇಟಿಗೆ ಬಂದವರು ದೇವರ ದರ್ಶನ ಅಷ್ಟೇ ಮಾಡಿ. ರೆಡ್ ಅಲರ್ಟ್ ಇರುವ ಈ ರಸ್ತೆಗಳಲ್ಲಿ ಪ್ರಯಾಣ ಸೂಕ್ತವಲ್ಲ. ಯಾವುದೇ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್​ಗೆ ಮಾಹಿತಿ ನೀಡಿ ಎಂದರು.

ಇದನ್ನೂ ಓದಿ: Bekal Fort: ಬೇಕಲ ಕೋಟೆ ಬಳಿ ನೈತಿಕ ಪೊಲೀಸ್ ಗಿರಿ, ಪ್ರವಾಸಿಗರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ನಾಲ್ವರ ಬಂಧನ

ಪ್ರಾಕೃತಿಕ ವಿಕೋಪ ನಿಯಂತ್ರಣ ತಂಡ ರಚನೆ

ಈ ಬಾರಿಯ ಮಳೆಗೆ ಸದ್ಯ ಏಳು ಪ್ರಾಣ ಹಾನಿ ಸಂಭವಿಸಿದೆ. ಸಿಎಂ ಸಿದ್ಧರಾಮಯ್ಯ ಅವರು ಹಲವಾರು ನಿರ್ದೇಶನ ನೀಡಿದ್ದಾರೆ. ಸಾವು ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ಬಾರಿ ಪ್ರತೀ ಗ್ರಾಮ ಪಂಚಾಯತಿ ನಗರಸಭೆ, ಪಾಲಿಕೆ ಸೇರಿ 296 ಪ್ರಾಕೃತಿಕ ವಿಕೋಪ ನಿಯಂತ್ರಣ ತಂಡ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಅನುದಾನ, ಅಧಿಕಾರ ಎಲ್ಲವನ್ನೂ ಅವರಿಗೆ ಕೊಡಲಾಗಿದೆ. ಎಲ್ಲವನ್ನೂ ಡಿಸಿ ಕಚೇರಿ ಮೂಲಕ ನಿಯಂತ್ರಣ ಮಾಡಲಾಗುತ್ತೆ.

ಸ್ಥಳೀಯ ಮಟ್ಟದಲ್ಲಿ ಮೊದಲ ರೆಸ್ಪಾನ್ಸ್ ಟೀಂ ಕೆಲಸ ಮಾಡಲಿದೆ. ಅಪಾಯಕಾರಿ ಜಾಗದಲ್ಲಿ ಇರುವವರನ್ನು ನೋಟಿಸ್​ ಕೊಟ್ಟು ಸ್ಥಳಾಂತರ ಮಾಡುತ್ತೇವೆ. ಹೋಗಿಲ್ಲ ಅಂದರೆ ಪೊಲೀಸ್ ಬಲ ಪ್ರಯೋಗಿಸಿ ಸ್ಥಳಾಂತರ ಮಾಡುತ್ತೇವೆ. ಪ್ರಾಣ ಉಳಿಸಲು ಇಂಥ ಕ್ರಮಗಳ ಅಗತ್ಯ ಇದೆ.

ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ

ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಫೋಟೋ, ಸೆಲ್ಫಿ ತೆಗೆಯುತ್ತಾರೆ. ಇಂಥ ಜಾಗಗಳಲ್ಲಿ ನಿಷೇಧದ ಆದೇಶಗಳನ್ನು ನಾವು ಮಾಡಿದ್ದೇವೆ. ಎಂಟು ಬೀಚ್​ಗಳಲ್ಲಿ 24 ಜನ ಹೋಂ ಗಾರ್ಡ್ಸ್​​ಗಳನ್ನ ನೇಮಿಸಿದ್ದೇವೆ. ಟ್ರೆಕ್ಕಿಂಗ್ ಪಾಯಿಂಟ್, ಕುಕ್ಕೆ ಬಳಿಯ ಕಾಡು ಪ್ರವೇಶ ಕೂಡ ನಿಷೇಧಿಸಿದ್ದು, ಇದನ್ನ ಮೀರಿದರೆ ನಾವು ಖಂಡಿತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Mangaluru Rains: ಭಾರೀ ಮಳೆ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಟ್ಟಕ್ಕೆ ತೆರಳದಂತೆ ಭಕ್ತರಿಗೆ ಎಚ್ಚರಿಕೆ

ಕಾಲು ಸಂಕ, ಸೇತುವೆ ಬಿರುಕು ಬಿಟ್ಟ ಜಾಗಗಳಲ್ಲಿ ಅಪಾಯ ಇದೆ. ಅಲ್ಲಿ ಜ‌ನ ಸಂಚಾರ ನಿಷೇಧದ ಫಲಕ ಅಳವಡಿಸಲು ಸೂಚಿಸಿದ್ದೇವೆ. ರೆಡ್ ಅಲರ್ಟ್ ಸಮಯದಲ್ಲಿ ಹೆಚ್ಚು ಗಮನ ಹರಿಲಾಗುತ್ತೆ. ಈ ಫಲಕ ಇದ್ದೂ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಮಿಷನರ್ ಕುಲದೀಪ್ ಜೈನ್, ಎಸ್ಪಿ ರಿಷ್ಯಂತ್​ ಕೂಡ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:20 pm, Fri, 28 July 23