ಮಾಸ್ಕ್​ಮ್ಯಾನ್ ಚಿನ್ನಯ್ಯ, ಪ್ರಭಾವಿ ಸ್ವಾಮೀಜಿ ನಡುವಣ ಮೀಟಿಂಗ್ ರಹಸ್ಯ ಬಿಚ್ಚಿಟ್ಟ ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯ ಪ್ರಕರಣದ ಕುರಿತು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮಾಸ್ಕ್​ಮ್ಯಾನ್ ಚಿನ್ನಯ್ಯ ಪ್ರಭಾವಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಎಲ್ಲವನ್ನೂ ತಿಳಿಸಿದ್ದ. ಸ್ವಾಮೀಜಿಗಳು ಕೂಡ ಮುಖ್ಯಮಂತ್ರಿಗಳಿಗೆ ಹೇಳಿ ನ್ಯಾಯಕೊಡಿಸುವ ಭರವಸೆ ನೀಡಿ ಸುಮ್ಮನಾಗಿದ್ದಾರೆ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

ಮಾಸ್ಕ್​ಮ್ಯಾನ್ ಚಿನ್ನಯ್ಯ, ಪ್ರಭಾವಿ ಸ್ವಾಮೀಜಿ ನಡುವಣ ಮೀಟಿಂಗ್ ರಹಸ್ಯ ಬಿಚ್ಚಿಟ್ಟ ಮಹೇಶ್ ಶೆಟ್ಟಿ ತಿಮರೋಡಿ
ಮಹೇಶ್ ಶೆಟ್ಟಿ ತಿಮರೋಡಿ
Edited By:

Updated on: Dec 08, 2025 | 2:11 PM

ಮಂಗಳೂರು, ಡಿಸೆಂಬರ್ 8: ಧರ್ಮಸ್ಥಳ ಪ್ರಕರಣ ಸಂಬಂಧ ಮಾಸ್ಕ್​ಮ್ಯಾನ್ ಚಿನ್ನಯ್ಯ (Chinnayya) ಹಾಗೂ ಪ್ರಭಾವಿ ಸ್ವಾಮೀಜಿಯೊಬ್ಬರ ನಡುವೆ ನಡೆದಿದ್ದ ಮೀಟಿಂಗ್ ರಹಸ್ಯವನ್ನು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಬಹಿರಂಗಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ನಾನು ಮತ್ತು ಚಿನ್ನಯ್ಯ ಆ ಮಠಕ್ಕೆ ಹೋಗಿರುವುದು ಸತ್ಯ. ನಮ್ಮ ಜೊತೆಗೆ ಸೌಜನ್ಯ ಮನೆಯವರೂ ಮಠಕ್ಕೆ ಬಂದಿದ್ದರು. ಅಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಸ್ವಾಮೀಜಿಯ ಮುಂದೆಯೇ ಚಿನ್ನಯ್ಯ ಎಲ್ಲವನ್ನೂ ಬಿಡಿಸಿ ಹೇಳಿದ್ದಾನೆ. ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋಕ್ಕಿಂತ ಜಾಸ್ತಿಯೇ ಅಲ್ಲಿ ಮಾತನಾಡಿದ್ದಾನೆ. ಯಾರೆಲ್ಲ ಅತ್ಯಾಚಾರ ಎಸಗಿದ್ದಾರೆ, ಮಾಡಿಸಿದ್ದಾರೆ ಎಲ್ಲವನ್ನೂ ಹೇಳಿದ್ದಾನೆ ಎಂದು ಹೇಳಿದ್ದಾರೆ.

ಸ್ವಾಮೀಜಿಗಳು ಯಾಕೆ ಈ ವಿಚಾರವನ್ನು ಸಮಾಜದ ಮುಂದೆ ಹೇಳುತ್ತಿಲ್ಲ? ಸ್ವಾಮೀಜಿ ಸ್ವತಃ ಈ ವಿಚಾರವನ್ನು ಮುಖ್ಯಮಂತ್ರಿಗಳಲ್ಲಿ ಹೇಳಿ ಶಿಕ್ಷೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಶಿಕ್ಷೆ ಕೊಡಿಸಿಯೇ ಕೊಡಿಸುತ್ತೇನೆಂದು ಮಹಾಕಾಳನ ಮೇಲೆ ಪ್ರಮಾಣ ಮಾಡಿದ್ದರು. ಈಗ ಸ್ವಾಮೀಜಿಗಳು ನ್ಯಾಯ ಕೊಡಿಸಲಿ. ಅದು ಬಿಟ್ಟು ಮಠದಲ್ಲಿ ಕುಳಿತು ರಾಜಕೀಯ ಮಾಡುವುದಲ್ಲ. ಎಲ್ಲಾ ಸ್ವಾಮೀಜಿಗಳಿಗೂ ಈ ಮಾತು ಅನ್ವಯಿಸುತ್ತದೆ ಎಂದು ತಿಮರೋಡಿ ಹೇಳಿದ್ದಾರೆ.

ನಾವು ನೇರವಾಗಿ ಸನಾತನ ಧರ್ಮದ ಪ್ರತಿಪಾದಕರು. ಹಿಂದೂ ಧರ್ಮದ ವಿರೋಧಿಗಳಲ್ಲ. ಈ ವಿಚಾರವನ್ನು ಹಿಂದೆಯೂ ಹೇಳಿದ್ದೇನೆ, ಇಂದೂ ಹೇಳುತ್ತೇನೆ. ಮುಂದೆಯೂ ಹೇಳುತ್ತೇನೆ. ಎಸ್​ಐಟಿ ತನಿಖೆ ಆರಂಭವೇ ಆಗಿಲ್ಲ. ಅತ್ಯಾಚಾರಿಗಳ ವಿಚಾರಣೆ ಇನ್ನಷ್ಟೇ ಆಗಬೇಕಿದೆ. ಇಲ್ಲಿ ತನಕ ಬರೇ ಒಂದು ಬುರುಡೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ. ಎಸ್​ಐಟಿ ಒಳಗಡೆಯೇ ಷಡ್ಯಂತ್ರ ಮಾಡುವವರು ತುಂಬಿದ್ದಾರೆ. ಸ್ವತಹ ಎಸ್​​ಪಿ ಕೂಡಾ ಷಡ್ಯಂತ್ರದಲ್ಲಿ ಶಾಮೀಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯವೂ ಹೊರಬರಲಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಮಗೆ ಯಾರ ಮೇಲೆಯೂ ನಂಬಿಕೆ ಇಲ್ಲದಂತೆ ಆಗಿದೆ. ಮಾದ್ಯಮ, ಕಾರ್ಯಾಂಗ ಯಾವುದರ ಮೇಲೆಯೂ ನಂಬಿಕೆಯಿಲ್ಲ. ದೇಶದ ಕಾನೂನಿನ ಮೇಲೆ ಮಾತ್ರ ನಮಗೆ ನಂಬಿಕೆ ಇರುವುದು. ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ನಾವು ಹೋರಾಟ ಮಾಡುತ್ತೇವೆ ಎಂದು ತಿಮರೋಡಿ ಹೇಳಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಸಂಕಷ್ಟ

ಏತನ್ಮಧ್ಯೆ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಸಂಕಷ್ಟ ಎದುರಾಗಿದೆ. ಹೀಗಾಗಿ ಸೋಮವಾರ ಅವರು ಪುತ್ತೂರು ಎಸಿ ಕೋರ್ಟ್​​ಗೆ ವಿಚಾರಣೆಗೆ ಹಾಜರಾದರು. ಅದಕ್ಕೂ ಮುನ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗಡಿಪಾರು ವಿಚಾರವಾಗಿ ಇಂದು ವಿಚಾರಣೆಗೆ ಹಾಜರಾಗುವಂತೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ನೋಟಿಸ್ ನೀಡಿದ್ದರು. ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಅಂತ ಕಾರಣ ಕೇಳಿ ನೋಟಿಸ್ ನೀಡಿದ್ದರು.

ಇದನ್ನೂ ಓದಿ: ಧರ್ಮಸ್ಥಳ ಕೇಸ್​​: ಜಾಮೀನು ಸಿಕ್ಕರೂ ಮಾಸ್ಕ್​​ಮ್ಯಾನ್​​ ಚಿನ್ನಯ್ಯಗಿಲ್ಲ ಬಿಡುಗಡೆ ಭಾಗ್ಯ!

ಈ ಹಿಂದೆಯೂ ತಿಮರೋಡಿ ವಿರುದ್ಧ ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಗಡಿಪಾರು ನೋಟಿಸ್ ನೀಡಿದ್ದರು. ರಾಯಚೂರಿಗೆ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ