ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮಂಗಳೂರು; ಶೇ 20ರ ಮಳೆ ಕೊರತೆ
ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಂಟು ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ. ಬೆಳ್ತಂಗಡಿ ಶೇ 40, ಬಂಟ್ವಾಳ ಶೇ 24, ಮಂಗಳೂರು ಶೇ 20, ಪುತ್ತೂರು ಶೇ 37, ಕಡಬ ಶೇ 33, ಕಾರ್ಕಳ ಶೇ 22, ಬ್ರಹ್ಮಾವರ ಶೇ 21 ಮತ್ತು ಹೆಬ್ರಿ ಶೇ 39 ಕೊರತೆಯಿದೆ.
ಮಂಗಳೂರು, ಆಗಸ್ಟ್ 26: ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಕರಾವಳಿ ಭಾಗದಲ್ಲಿ (Coastal Karnataka) ಈ ವರ್ಷ ತೀವ್ರ ಮಳೆ ಕೊರತೆ (Rain deficit) ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆಯೂ ಕಾಣಿಸುತ್ತಿಲ್ಲ. ಮಂಗಳೂರು ಸೇರಿದಂತೆ ರಾಜ್ಯದ 113 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಗುರುತಿಸಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರವು ಜೂನ್ 1 ರಿಂದ ಆಗಸ್ಟ್ 19 ರವರೆಗಿನ ಮಳೆಯ ಆಧಾರದ ಮೇಲೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಸುಮಾರು ಶೇ 20 ರ ಮಳೆ ಕೊರತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಮಳೆ ಕೊರತೆಯಿದೆ. ಆದಾಗ್ಯೂ, ಮೂರು ವಾರಗಳಿಗಿಂತ ಹೆಚ್ಚು ಕಾಲದ ಶುಷ್ಕ ಹವಾಮಾನ, ತೇವಾಂಶದ ಕೊರತೆ, ಅಂತರ್ಜಲ ಸೂಚ್ಯಂಕ, ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹಣೆ ಮತ್ತು ನದಿಗಳಲ್ಲಿನ ನೀರಿನ ಒಳಹರಿವಿನ ಆಧಾರದ ಮೇಲೆ ಮಂಗಳೂರನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಂಟು ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ. ಬೆಳ್ತಂಗಡಿ ಶೇ 40, ಬಂಟ್ವಾಳ ಶೇ 24, ಮಂಗಳೂರು ಶೇ 20, ಪುತ್ತೂರು ಶೇ 37, ಕಡಬ ಶೇ 33, ಕಾರ್ಕಳ ಶೇ 22, ಬ್ರಹ್ಮಾವರ ಶೇ 21 ಮತ್ತು ಹೆಬ್ರಿ ಶೇ 39 ಕೊರತೆಯಿದೆ. ಸುಳ್ಯದಲ್ಲಿ ಶೇ 18, ಮೂಡುಬಿದಿರೆ ಶೇ 11, ಮುಲ್ಕಿ ಶೇ 15, ಉಳ್ಳಾಲ ಶೇ 16, ಕುಂದಾಪುರ ಶೇ 8, ಉಡುಪಿ ಶೇ 14, ಬೈಂದೂರು ಶೇ 16 ಮತ್ತು ಕಾಪುವಿನಲ್ಲಿ ಶೇ 9 ಕೊರತೆ ವರದಿಯಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ; ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ
ಆರು ವರ್ಷಗಳ ಹಿಂದೆ ರಾಜ್ಯದ 160 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಸೇರಿಸಲಾಗಿತ್ತು. ಮಂಗಳೂರಿನಲ್ಲಿ ಸರಾಸರಿ 301 ಮಿ.ಮೀ ಮತ್ತು ಬಂಟ್ವಾಳದಲ್ಲಿ 337 ಮಿ.ಮೀ ಮಳೆಯಾಗಿತ್ತು. ಆದರೆ, ಈ ವರ್ಷ ಮಂಗಳೂರಿನಲ್ಲಿ 75 ಮಿ.ಮೀ ಮತ್ತು ಬಂಟ್ವಾಳದಲ್ಲಿ 91 ಮಿ.ಮೀ. ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ