Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಸಿಂಗಾಪುರ ಮಧ್ಯೆ ಜನವರಿ 21ರಿಂದ ನೇರ ವಿಮಾನ ಸಂಚಾರ: ಇಲ್ಲಿದೆ ವೇಳಾಪಟ್ಟಿ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 21 ರಿಂದ ಮಂಗಳೂರು ಮತ್ತು ಸಿಂಗಾಪುರ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸೇವೆ ಆರಂಭಿಸುತ್ತಿದೆ. ಇದು ಮಂಗಳೂರಿಗೆ ಆಗ್ನೇಯ ಏಷ್ಯಾದ ಮೊದಲ ಅಂತರರಾಷ್ಟ್ರೀಯ ಸಂಪರ್ಕವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರುವರಿ 1 ರಿಂದ ದೆಹಲಿ ಮತ್ತು ಜನವರಿ 4 ರಿಂದ ಪುಣೆಗೆ ನೇರ ವಿಮಾನ ಸೇವೆಗಳನ್ನೂ ಆರಂಭಿಸಲಿದೆ.

ಮಂಗಳೂರು ಸಿಂಗಾಪುರ ಮಧ್ಯೆ ಜನವರಿ 21ರಿಂದ ನೇರ ವಿಮಾನ ಸಂಚಾರ: ಇಲ್ಲಿದೆ ವೇಳಾಪಟ್ಟಿ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನImage Credit source: PTI
Follow us
Ganapathi Sharma
|

Updated on: Dec 12, 2024 | 8:14 AM

ಮಂಗಳೂರು, ಡಿಸೆಂಬರ್ 12: ಮಂಗಳೂರು ಮತ್ತು ಸಿಂಗಾಪುರ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 21 ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರ ಆರಂಭಿಸಲಿದೆ. ಇದರೊಂದಿಗೆ ಮಂಗಳೂರಿನೊಂದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೇಯ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತಾಣವಾಗಿ ಸಿಂಗಾಪುರ ಗುರುತಿಸಿಕೊಳ್ಳಲಿದೆ. ಈವರೆಗೆ, ಮಂಗಳೂರಿನಿಂದ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರ ಕಾರ್ಯಾಚರಿಸುತ್ತಿವೆ.

ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪ್ರಕಟಣೆ ತಿಳಿಸಿದೆ.

ಮಂಗಳೂರು ಸಿಂಗಾಪುರ ವಿಮಾನದ ಸಮಯ

ವಿಮಾನ ಸಂಖ್ಯೆ IX 0862 ಮಂಗಳೂರಿನಿಂದ 5.55 ಗಂಟೆಗೆ ಹೊರಟು 13.25 ಗಂಟೆಗೆ ಸಿಂಗಾಪುರ ತಲುಪಲಿದೆ. ವಿಮಾನ ಸಂಖ್ಯೆ IX 0861 ಸಿಂಗಾಪುರದಿಂದ 14.25 ಗಂಟೆಗೆ ಹೊರಟು 16.55 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.

ಮಂಗಳೂರು ದೆಹಲಿ ಮಧ್ಯೆ ಪ್ರತಿ ದಿನ ನೇರ ವಿಮಾನ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1 ರಿಂದ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿ ದಿನ ನೇರ ವಿಮಾನಯಾನ ಸೇವೆ ಒದಗಿಸಲಿದೆ. ವಿಮಾನ ಸಂಖ್ಯೆ IX 1552 ಮಂಗಳೂರಿನಿಂದ 6.40 ಗಂಟೆಗೆ ಹೊರಟು 9.35 ಗಂಟೆಗೆ ದೆಹಲಿಗೆ ತಲುಪಲಿದೆ. ವಿಮಾನ ಸಂಖ್ಯೆ IX 2768 ದೆಹಲಿಯಿಂದ 6.40 ಗಂಟೆಗೆ ಹೊರಟು ಮಂಗಳೂರಿಗೆ 9.35 ಗಂಟೆಗೆ ತಲುಪಲಿದೆ.

ಮಂಗಳೂರು ಪುಣೆ ನೇರ ವಿಮಾನ ವೇಳಾಪಟ್ಟಿ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜನವರಿ 4 ರಿಂದ ಮಂಗಳೂರು ಮತ್ತು ಪುಣೆ ನಡುವೆ ಎರಡು ನೇರ ವಿಮಾನಗಳನ್ನು ನಿರ್ವಹಿಸಲಿದೆ. ವಿಮಾನ ಸಂಖ್ಯೆ IX 2256 ಪುಣೆಯಿಂದ 8 ಗಂಟೆಗೆ ಹೊರಟು 9.25 ಗಂಟೆಗೆ ಪುಣೆಗೆ ತಲುಪುತ್ತದೆ. ವಿಮಾನ ಸಂಖ್ಯೆ 2257 ಪುಣೆಯಿಂದ 9.55 ಗಂಟೆಗೆ ಹೊರಟು 11.40 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ವಿಮಾನ ಸಂಖ್ಯೆ 2236 ಮಂಗಳೂರಿನಿಂದ 18.30 ಗಂಟೆಗೆ ಹೊರಟು 20.00 ಗಂಟೆಗೆ ಪುಣೆಗೆ ಮತ್ತು ವಿಮಾನ ಸಂಖ್ಯೆ 2237 ಪುಣೆಯಿಂದ 20.35 ಗಂಟೆಗೆ ಹೊರಟು 22.05 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.

ಸರ್ಕಾರಕ್ಕೆ ಮನವಿ ಮಾಡಿದ್ದ ಸಂಸದ ಬ್ರಿಜೇಶ್ ಚೌಟ

ಸಿಂಗಾಪುರ ಮಂಗಳೂರು ನೇರ ವಿಮಾನ ಸೇವೆ ಸಂಬಂಧ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಮಾಡಿದ್ದರು. ಮಂಗಳೂರು ಮತ್ತು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದರು.

ಸಿಂಗಾಪುರ ಮತ್ತು ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯೊಂದರ ಮನವಿಯ ಮೇರೆಗೆ ಚೌಟ ಅವರು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಬಂತು APK ಫೈಲ್: ಆ್ಯಪ್ ಇನ್​ಸ್ಟಾಲ್ ಆಗುತ್ತಿದ್ದಂತೇ ಮೊಬೈಲ್ ಹ್ಯಾಕ್, 1.5 ಲಕ್ಷ ರೂ. ಮಾಯ

ಮಂಗಳೂರು ಸಿಂಗಾಪುರ ಮಧ್ಯೆ ನೇರ ವಿಮಾನಯಾನ ಸಂಪರ್ಕವು ಉದ್ಯಮ ಕ್ಷೇತ್ರಕ್ಕೆ ಪೂರಕವಾಗಿರಲಿದ್ದು, ಪ್ರಯಾಣವನ್ನು ಸುಲಭಗೊಳಿಸಲಿದೆ. ಜತೆಗೆ, ಆಸಿಯಾನ್ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಭಾರತವನ್ನು ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರದ ಆಕ್ಟ್ ಈಸ್ಟ್ ನೀತಿಗೆ ಪೂರಕವಾಗಿರಲಿದೆ ಎಂದು ಚೌಟ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ