ಉಳ್ಳಾಲ ಕೋಟೆಕಾರು ಬ್ಯಾಂಕ್ ದರೋಡೆ: ತನಿಖೆಯ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಖತರ್ನಾಕ್ ಪ್ಲಾನ್ ಹೀಗಿತ್ತು!

| Updated By: Ganapathi Sharma

Updated on: Jan 18, 2025 | 12:57 PM

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಉಳ್ಳಾಲದ ಕೋಟೆಕಾರು ಬ್ಯಾಂಕ್ ದರೋಡೆಕೋರರು ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ಹೂಡಿದ್ದ ಸಂಚಿನ ಮಾಹಿತಿ ಈಗ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಎರಡು ಕಾರುಗಳನ್ನು ಬಳಸಿ ಪೊಲೀಸರನ್ನು ಗೊಂದಲಕ್ಕೀಡು ಮಾಡಿರುವುದು ಗೊತ್ತಾಗಿದೆ. 6 ನಿಮಿಷಗಳಲ್ಲಿ ಬ್ಯಾಂಕ್ ಲೂಟಿ ಮಾಡಿ ಪರಾರಿಯಾದ ದುಷ್ಕರ್ಮಿಗಳು ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಮಾಡಿದ್ದ ಪ್ಲ್ಯಾನ್ ಏನು ಎಂಬ ಮಾಹಿತಿ ಇಲ್ಲಿದೆ.

ಉಳ್ಳಾಲ ಕೋಟೆಕಾರು ಬ್ಯಾಂಕ್ ದರೋಡೆ: ತನಿಖೆಯ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಖತರ್ನಾಕ್ ಪ್ಲಾನ್ ಹೀಗಿತ್ತು!
ಕೋಟೆಕಾರು ಬ್ಯಾಂಕ್
Follow us on

ಮಂಗಳೂರು, ಜನವರಿ 18: ಮಂಗಳೂರಿನ ಉಳ್ಳಾಲ ಸಮೀಪದ ಕೋಟೆಕಾರು ಬ್ಯಾಂಕ್​ನಲ್ಲಿ ನಡೆದಿದ್ದ ದರೋಡೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದ ಸಂದರ್ಭ ನೋಡಿಯೇ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಖತರ್ನಾಕ್ ಪ್ಲಾನ್ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಪೊಲೀಸರನ್ನು ಗೊಂದಲಕ್ಕಿಡು ಮಾಡುವುದಕ್ಕಾಗಿಯೇ ದರೋಡೆಕೋರರು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ‌ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದೆ. ದರೋಡೆಕೋರರು ಮಂಗಳೂರು-ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ‌ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ.

ಕೇವಲ 6 ನಿಮಿಷದಲ್ಲಿ 12 ಕೋಟಿ ಲೂಟಿ: ದರೋಡೆಕೋರರು ಪರಾರಿ!

ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆಸಿ ರೋಡ್ ಶಾಖೆಗೆ ಶುಕ್ರವಾರ ಮಧ್ಯಾಹ್ನ ಫಿಯೆಟ್ ಕಾರಿನಲ್ಲಿ ಆಗಮಿಸಿದ ಐವರು ಆಗಂತುಕರ ತಂಡ, ಬಂದೂಕು ತೋರಿಸಿ ಡಕಾಯಿತಿ ಮಾಡಿತ್ತು. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿದ್ದ ಚಿನ್ನ, ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಪರಾರಿಯಾಗಿತ್ತು.

ಕೋಟೆಕಾರು ಬ್ಯಾಂಕ್ ಆವರಣದಲ್ಲಿ ಶನಿವಾರ ಗ್ರಾಹಕರ ವಾಗ್ವಾದ

ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿದ್ದ ಐವರಿದ್ದ ಡಕಾಯಿತರು ರಾಬರಿ ಮಾಡಿದ್ದರು. ಕಳವಾದ ವಸ್ತುಗಳ ಪೈಕಿ 11 ಲಕ್ಷ ರೂ. ನಗದು ಇದ್ದರೆ, ಇನ್ನುಳಿದಿದ್ದು ಚಿನ್ನಾಭರಣ. ಒಟ್ಟು 12 ಕೋಟಿ ರೂ. ನಗನಾಣ್ಯ ಲೂಟಿ ಮಾಡಿರುವ ಬಗ್ಗೆ ಅಂದಾಜಿಸಲಾಗಿದೆ. ಅದೇ ಸಂಧರ್ಭದಲ್ಲಿ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೂ ದರೋಡೆಕೋರರು ಬೆದರಿಸಿದ್ದರು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಕೋಟೆಕಾರು ಬ್ಯಾಂಕ್​ ದರೋಡೆ: ಪುಣ್ಯಕ್ಕೆ 6 ಕೋಟಿ ಚಿನ್ನ ಬಿಟ್ಟು ಹೋದ ಖದೀಮರು, ಟೋಲ್​ನಲ್ಲಿ ಕಾರು ಪತ್ತೆ!

ದರೋಡೆಕೋರರ ತಂಡ ಕೇರಳಕ್ಕೆ ಪಲಾಯನ ಮಾಡಿದೆ ಎನ್ನಲಾಗಿತ್ತು. ಹೀಗಾಗಿ ಮಂಗಳೂರಿನ ಮೂರು ಪೊಲೀಸ್ ತಂಡಗಳು ಕೇರಳಕ್ಕೆ ತೆರಳಿ ಅಲ್ಲಿಯೂ ಶೋಧ ಕಾರ್ಯ ನಡೆಸಿವೆ. ಏತನ್ಮಧ್ಯೆ, ದರೋಡೆಕೋರರ ತಂಡ ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ಮಾಡಿದ್ದ ಖತರ್ನಾಕ್ ಪ್ಲ್ಯಾನ್​ ಬಹಿರಂಗವಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ