Mangaluru News: ಅಕ್ರಮ ಗೋಸಾಗಾಟ, ಮಂಗಳೂರಿನಲ್ಲಿ ನಾಲ್ವರ ಬಂಧನ
ದನಗಳ ಕೈಕಾಲುಗಳನ್ನು ಕಟ್ಟಿ ಒಂದರ ಮೇಲೊಂದು ರಾಶಿ ಹಾಕಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಕವರ್ ಬಳಸಿ ಮುಚ್ಚಲಾಗಿತ್ತು ಮತ್ತು ಪ್ಲಾಸ್ಟಿಕ್ ಟ್ರೇಗಳನ್ನು ಬಳಸಿ ಮರೆಮಾಡಲಾಗಿತ್ತು ಎಂದು ಕುಮಾರ್ ಆರೋಪಿಸಿದ್ದಾರೆ.
ಮಂಗಳೂರು: ಕರಾವಳಿ ನಗರ ಮಂಗಳೂರಿನಲ್ಲಿ ಅಕ್ರಮವಾಗಿ ದನ ಸಾಗಾಟ (illegally transporting cattle) ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಉಳ್ಳಾಲ ನಿವಾಸಿಗಳಾದ ಅಹ್ಮದ್ ಇರ್ಷಾದ್, ಖಾಲಿದ್ ಬಿಎಂ, ಜಾಫರ್ ಸಾದಿಕ್ ಮತ್ತು ಪಯಾಝ್ ಎಂಬುವರನ್ನು ಸೋಮವಾರ ರಾತ್ರಿ ಮಂಗಳೂರು ಹೊರವಲಯದ ಕಲ್ಲಾಪು ಬಳಿ ಬಂಧಿಸಲಾಗಿದೆ.
ಭಾನುವಾರ ದಕ್ಷಿಣ ಕನ್ನಡದ ಅಂಬ್ಲಮೊಗರು ಗ್ರಾಮದಲ್ಲಿ ನಾಲ್ವರು ವೃದ್ಧೆಯೊಬ್ಬರಿಂದ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ವ್ಯಾನ್‌ನಲ್ಲಿ ಸಾಗಿಸುತ್ತಿದ್ದರು. ವ್ಯಾನ್ ದ್ವಿಚಕ್ರವಾಹನವನ್ನು ಹಿಂಬಾಲಿಸುತ್ತಿತ್ತು. ಉಳ್ಳಾಲದ ಅಲೇಕಲ ಎಂಬಲ್ಲಿ ಹಸುಗಳನ್ನು ವಧೆ ಮಾಡಲು ವ್ಯಾನ್‌ನಲ್ಲಿ ಸಾಗಿಸಲಾಗುತ್ತಿತ್ತು. ವಾಹನದಲ್ಲಿ ತಾಂತ್ರಿಕ ದೋಷ ಉಂಟಾಗಿ ವ್ಯಾನ್ನಲ್ಲಿದ್ದ ಮೂವರು ವಾಹನವನ್ನು ತಳ್ಳಲು ಪ್ರಾರಂಭಿಸಿದರು. ಸ್ಥಳೀಯ ನಿವಾಸಿಗಳು ವಾಹನವನ್ನು ತಳ್ಳಿ ಸಹಾಯ ಮಾಡಲು ಹೋದಾಗ ನಾಲ್ಕು ಹಸುಗಳನ್ನು ಕಟ್ಟಿ ಹಾಕಿ ಟಾರ್ಪಲ್ ಹಾಕಿರುವುದು ಗಮನಕ್ಕೆ ಬಂದಿತ್ತು. ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ನಂತರ ಸ್ಥಳೀಯರೊಬ್ಬರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ದೂರು ನೀಡಿದ ಶರತ್ ಕುಮಾರ್ ಎಂಬವರ ಪ್ರಕಾರ, ಕೆಲವು ಸ್ನೇಹಿತರ ಜತೆಗಿದ್ದಾಗ ಮುನ್ನೂರು ಗ್ರಾಮದ ರಸ್ತೆಯಲ್ಲಿ ರಾತ್ರಿ 11.30 ರ ಸುಮಾರಿಗೆ ವ್ಯಾನ್ ಚಲಿಸಲು ಹೆಣಗಾಡುತ್ತಿರುವುದನ್ನು ಕಂಡುಕೊಂಡರು. ವ್ಯಾನ್ ಹತ್ತಿರ ಬರುತ್ತಿದ್ದಂತೆ ಅದರ ಚಾಲಕ ಮತ್ತು ಸಹ ಪ್ರಯಾಣಿಕ ಮತ್ತು ಮೋಟಾರ್ ಸೈಕಲ್‌ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾನೂನು ರದ್ದತಿ ಸುಳಿವು; ರಾಜ್ಯದಾದ್ಯಂತ ಮುಂದುವರಿದ ಬಿಜೆಪಿ ಪ್ರತಿಭಟನೆ
ದನಗಳ ಕೈಕಾಲುಗಳನ್ನು ಕಟ್ಟಿ ಒಂದರ ಮೇಲೊಂದು ರಾಶಿ ಹಾಕಲಾಗಿತ್ತು. ಅವುಗಳನ್ನು ಪ್ಲಾಸ್ಟಿಕ್ ಕವರ್ ಬಳಸಿ ಮುಚ್ಚಲಾಗಿತ್ತು ಮತ್ತು ಪ್ಲಾಸ್ಟಿಕ್ ಟ್ರೇಗಳನ್ನು ಬಳಸಿ ಮರೆಮಾಡಲಾಗಿತ್ತು ಎಂದು ಕುಮಾರ್ ಆರೋಪಿಸಿದ್ದಾರೆ.
ಬಂಧಿತ ನಾಲ್ವರ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಹತ್ಯೆ ತಡೆ ಕಾಯ್ದೆಯ ಸೆಕ್ಷನ್ 4, 5, 7 ಮತ್ತು 12, ಸೆಕ್ಷನ್ 11(1) (ಎ), 11 (ಇ), 11 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 379 (ಕಳ್ಳತನ) ಅಡಿಯೂ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Tue, 6 June 23