ಮಂಗಳೂರು, ಮಾರ್ಚ್ 05: ಫುಡ್ ಪಾಯಿಸನ್ (food poison) ಆಗಿ ಹೊಟ್ಟೆ ನೋವಿನಿಂದ 15 ಕೈದಿಗಳು ನರಳಾಡಿರುವಂತಹ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಏಕಾಏಕಿ ವಾಂತಿ ಮಾಡುತ್ತಾ ಹೊಟ್ಟೆ ನೋವಿನಿಂದ ಕೈದಿಗಳು ನರಳಾಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಕೈದಿಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಸ್ವಸ್ಥ ಕೈದಿಗಳನ್ನ ಸಹ ಕೈದಿಗಳು ತಾವೇ ಹೊತ್ತುತಂದಿದ್ದಾರೆ. ಈ ವೇಳೆ ನಾವು ಆಸ್ಪತ್ರೆಗೆ ಹೋಗುತ್ತೇವೆ ಎಂದು ಕೈದಿಗಳು ಪಟ್ಟು ಹಿಡಿದಿದ್ದರು. ಆಕ್ರೋಶಗೊಂಡಿದ್ದ ಕೈದಿಗಳನ್ನ ವಾಹನದಿಂದ ಕೆಳಗಿಳಿಸಿದ ಪೊಲೀಸರು, ಅಸ್ವಸ್ಥ ಕೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಬಳಿಕ ಜೈಲಿನಲ್ಲಿ ಪೊಲೀಸರ ವಿರುದ್ಧ ಕೈದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಇಂದು ಮಧ್ಯಾಹ್ನ ಉಪಹಾರ ಸೇವಿಸಿದ ಬಳಿಕ ಕೆಲವರು ಹೊಟ್ಟೆ ನೋವು ಎಂದು ಕೈದಿಗಳು ದೂರು ನೀಡಿದ್ದಾರೆ. ಸಂಜೆ 4-30ರ ಬಳಿಕ 40ಕ್ಕೂ ಅಧಿಕ ಕೈದಿಗಳಿಗೆ ಹೊಟ್ಟೆ ನೋವು ಸೇರಿದಂತೆ ವಾಂತಿ ಭೇದಿ ಶುರುವಾಗಿದೆ. ನಮ್ಮ ಪೊಲೀಸ್ ವ್ಯಾನ್ ಮೂಲಕ ಎಲ್ಲಾ ಕೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 45 ಜನರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ ಎಂದರು.
ಇದನ್ನೂ ಓದಿ: ದೇವರ ಪ್ರಸಾದ ಸೇವಿಸಿದ್ದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪಡೆದು ಜೈಲಿಗೆ ಭೇಟಿ ನೀಡಿದ್ದಾರೆ. ನೀರಿನ ಸ್ಯಾಂಪಲ್ ಹಾಗೂ ಆಹಾರವನ್ನ ಪರಿಶೀಲನೆ ಮಾಡಿದ್ದಾರೆ. ಒಬ್ಬ ಕೈದಿ ತುಂಬಾ ಗಂಭೀರ ಸ್ಥಿತಿಯಲ್ಲಿದ್ದು, ಐಸಿಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು 44 ಜನ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಬೆಳಗ್ಗಿನ ಆಹಾರದಲ್ಲಿ ಫುಡ್ ಕಂಟಾಮಿನೇಷನ್ ಆಗಿರುವ ಮಾಹಿತಿ ಇದೆ. ಜೈಲಿನ ಮುಖ್ಯ ಅಧೀಕ್ಷಕ ಕೈದಿಗಳಿಗೆ ಅವಲಕ್ಕಿ, ಸಾಂಬಾರ್, ಅನ್ನ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಆಹಾರದಿಂದ ಸಮಸ್ಯೆ ಎಂದು ಹೇಳುತ್ತಿದ್ದಾರೆ. ವಿವಿಧ ವಾರ್ಡ್ನ ಸುಮಾರು 350 ಕೈದಿಗಳ ಪೈಕಿ 45 ಜನಕ್ಕೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಳಗಿನ ತಿಂಡಿ ಸೇವಿಸಿದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ಕೋಲಾರದಲ್ಲಿ ನಡೆದಿತ್ತು. ಕೋಲಾರ ತಾಲ್ಲೂಕು ವೇಮಗಲ್ ಹೋಬಳಿಯ ಅಮ್ಮನಲ್ಲೂರು ಗ್ರಾಮದ ಅಂಬೇಡ್ಕರ್ ಹಾಸ್ಟೆಲ್ ದೋಸೆ ಚಟ್ನಿ ತಿಂದಿದ್ದ 20 ಮಕ್ಕಳು ಅಸ್ವಸ್ಥರಾಗಿದ್ದರು. ಅಸ್ವಸ್ಥ ಮಕ್ಕಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಯಾವುದೆ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: ಜೇವರ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ವಿದ್ಯಾರ್ಥಿನಿಯರು ಅಸ್ವಸ್ಥ
ಬೆಳಗಿನ ಉಪಹಾರಕ್ಕೆ ದೋಸೆ ಚೆಟ್ನಿ ತಿಂಡಿ ತಿಂದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಹಾಗೂ ಸುಸ್ತು ಕಾಣಿಸಿಕೊಂಡಿತ್ತು. ಹಾಗಾಗಿ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೊದಲಿಗೆ ಅಸ್ವಸ್ಥ ಮಕ್ಕಳನ್ನ ಹಾಸ್ಟೆಲ್ ಸಿಬ್ಬಂದಿ ಮತ್ತು ಪೋಷಕರು ಅಮ್ಮನಲ್ಲೂರು ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ರವಾನಿಸಿ ಚಿಕಿತ್ಸೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 pm, Wed, 5 March 25