ಮಂಗಳೂರು, ಜ.1: ಗ್ರಾಮೀಣ ಪ್ರದೇಶದಲ್ಲಿ ಮಾತ್ರ ನಡೆಯುವ ಕಂಬಳ ಕಳೆದ ಏಳು ವರ್ಷದ ಹಿಂದೆ ಮಂಗಳೂರು ನಗರಕ್ಕೆ ಕಾಲಿಟ್ಟಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನಲ್ಲೂ ಕಂಬಳ ಸದ್ದು ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಮಂಗಳೂರು ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ (Captain Brijesh Chowta) ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಕಂಬಳ (Mangaluru Kambala) ನಡೆದಿದೆ.
ದೇಶದ ಸೇನೆಯಲ್ಲಿ ಸೇವೆ ಮಾಡಿ ಊರಿಗೆ ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕರಾವಳಿಯ ಸಂಸ್ಕೃತಿಯನ್ನೂ ಉಳಿಸಿ ಬೆಳೆಸುವ ಪಣ ತೊಟ್ಟು ಈ ಕಂಬಳ ಆಯೋಜಿಸಿದ್ದಾರೆ. ನಗರದ ಬಂಗ್ರ ಕೂಳೂರು ಎಂಬಲ್ಲಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನೂರಾರು ಕೋಣಗಳ ಜೊತೆ ಓಡಿವೆ. ಕರಾವಳಿಗರಿಗೆ ಕಂಬಳ ಕ್ರೀಡೆ ಮಾಮೂಲಿ ವಿಚಾರವಾಗಿದ್ದರೂ ಮಂಗಳೂರು ನಗರವಾಸಿಗಳಿಗೆ ಕಂಬಳ ನೋಡಲು ಸಿಗುವುದು ಅಪರೂಪ.
ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ
ಕಂಬಳ ನೋಡಬೇಕು ಅಂದರೆ ಗ್ರಾಮೀಣ ಪ್ರದೇಶದತ್ತ ಹೋಗಬೇಕಾಗಿದ್ದ ಮಂಗಳೂರಿನ ಜನರಿಗೆ ಕಳೆದ ಏಳು ವರ್ಷದಿಂದ ಮಂಗಳೂರಿನಲ್ಲೇ ಕಂಬಳ ವೀಕ್ಷಿಸಬಹುದಾಗಿದೆ. ಬಿಜೆಪಿ ಮುಖಂಡ, ಉದ್ಯಮಿ ಬ್ರಿಜೇಶ್ ಚೌಟ ಮಂಗಳೂರಿನ ಜನರಿಗೆ ಇಂತಹ ಒಂದು ಅವಕಾಶ ಮಾಡಿಕೊಟ್ಟದ್ದಾರೆ. ನಗರದಲ್ಲಿ ಗದ್ದೆಗಳು ಇದ್ದ ಜಾಗದಲ್ಲಿ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಹಾಗಂತ ನಗರದ ಬಂಗ್ರಕೂಳೂರು ಎಂಬ ಪ್ರದೇಶದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಸೇರಿದ ಗೋಲ್ಡ್ ಪಿಂಚ್ ಸಿಟಿಯಲ್ಲಿ ಹಡಿಲು ಬಿದ್ದಿರುವ ಗದ್ದೆಗಳಲ್ಲೇ ಮಂಗಳೂರು ಕಂಬಳ ಆಯೋಜಿಸಲಾಗುತ್ತಿದೆ. ನಗರದ ಜನರು ತಮ್ಮ ಸಂಪ್ರದಾಯ ಕಲೆ ಹಾಗೂ ಸಂಸ್ಕೃತಿಯನ್ನು ಮರೆಯಬಾರದು ಅನ್ನೋ ಕಾರಣಕ್ಕೆ ಈ ಕಂಬಳ ಆಯೋಜನೆಗೆ ಬ್ರಿಜೇಶ್ ಚೌಟ ಕೈ ಹಾಕಿದ್ದಾರೆ.
#WATCH | Karnataka: 7th edition of Rama-Lakshmana Jodukere Kambala held in Mangaluru. pic.twitter.com/5ZkPgACUAM
— ANI (@ANI) December 31, 2023
ಮಂಗಳೂರು ಕಂಬಳದಲ್ಲಿ ಸುಮಾರು 140 ಜೊತೆ ಕೋಣಗಳು ಭಾಗವಹಿಸಿದ್ದು, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆದಿವೆ. ಕಂಬಳದಲ್ಲಿ ಕೇವಲ ಕೋಣಗಳ ಓಟ ನೋಡುವುದಷ್ಟೇ ಅಲ್ಲದೇ ಮಕ್ಕಳ ಪ್ರತಿಭೆಯನ್ನ ಪ್ರದರ್ಶಿಸಲೂ ಅವಕಾಶ ಕಲ್ಪಿಸಲಾಗಿತ್ತು.
ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ರೀಲ್ಸ್ ಮಾಡುವ ಸ್ಪರ್ಧೆ ಹಾಗೂ ಫೋಟೋಗ್ರಾಫಿ ಸ್ಪರ್ಧೆಯನ್ನೂ ನಡೆಸಲಾಗಿತ್ತು. ನಗರದಲ್ಲೇ ಕಂಬಳ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಂಗಳೂರು ಕಂಬಳ ಒಂದು ರೀತಿಯ ಜಾತ್ರೆಯ ವಾತಾವರಣವನ್ನೇ ಕಾಣಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ