ಮಂಗಳೂರು, ಫೆಬ್ರವರಿ 22: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿರುವ ಜಗತ್ತಿನ ಏಕೈಕ ಮಂದಸ್ಮಿತ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕದ (Mahamastakabhisheka) ಸಂಭ್ರಮ ಜೋರಾಗಿದೆ. 12 ವರ್ಷಗಳ ಬಳಿಕ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಫೆ.22ರಿಂದ ಮಾರ್ಚ್ 1 ರವರೆಗೂ ನಡೆಯಲಿದೆ. ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಈ ಮಹಾಮಸ್ತಕಾಭಿಷೇಕ ನಡೆಯುತ್ತದೆ. 9 ದಿನಗಳ ಕಾಲ ನಡೆಯುವ ಮಹಾ ಸಂಭ್ರಮಕ್ಕೆ ಭಕ್ತ ಗಣ ಕಾತುರದಿಂದ ಕಾಯುತ್ತಿದ್ದಾರೆ. ಮಹಾಮಸ್ತಾಕಭಿಷೇಕಕ್ಕೆ ಅಂತಿಮ ಹಂತದ ಸಿದ್ದತೆ ಮಾಡಲಾಗುತ್ತಿದೆ.
ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಶ್ರೀ ಗಂಧ ಸೇರಿದಂತೆ ವಿವಿಧ ದ್ರವ್ಯಗಳಿಂದ ಗೊಮ್ಮಟೇಶ್ವರನಿಗೆ ಅಭಿಷೇಕ ಮಾಡಲಾಗುತ್ತದೆ. ಮೊದಲ ಮೂರು ದಿನ 108, ಬಳಿಕ 216 ಮತ್ತು 504 ಸೇರಿದಂತೆ ಕೊನೆಯ ದಿನದಂದು 1008 ಕಲಶಾಭಿಷೇಕ ಮಾಡಲಾಗುತ್ತದೆ.
ಇದನ್ನೂ ಓದಿ: ಮಂಗಳೂರು: ಬೆಳ್ತಂಗಡಿಯಲ್ಲಿ ನವ ಗುಳಿಗ ದೈವಗಳಿಗೆ ನಡೆಯಿತು ಬಹಳ ಅಪರೂಪದ ಗಗ್ಗರ ಸೇವೆ
ಅಭಿಷೇಕಕ್ಕಾಗಿ 5 ಅಂತಸ್ತಿನ ಬೃಹತ್ ಅಟ್ಟಳಿಗೆ ನಿರ್ಮಾಣ ಮಾಡಲಾಗಿದ್ದು, ಅಟ್ಟಳಿಗೆ ಏರಿ ವಿವಿಧ ಯತಿ ಹಾಗೂ ಗಣ್ಯರಿಂದ ಅಭಿಷೇಕ ನೆರವೇರಿಸಲಾಗುತ್ತದೆ. ಹರಕೆ ರೂಪದಲ್ಲೂ ಭಕ್ತ ವೃಂದ ಅಭಿಷೇಕ ನೆರೆವೇರಿಸುತ್ತಾರೆ.
ಇದನ್ನೂ ಓದಿ: ದೈವಗಳ ಹರಕೆ ಕೋಲ ನೆರವೇರಿಸಿದ ಯು ಟಿ ಖಾದರ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ರೋಶ
ಮಹಾಮಸ್ತಾಕಾಭಿಷೇಕದ ಸಾನಿಧ್ಯ ವಹಿಸಲಿರುವ ಯುಗಳಮುನಿಗಳಾದ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಅಮರಕೀರ್ತಿ ಮುನಿಮಹಾರಾಜರು ವೇಣೂರು ಪುರಪ್ರವೇಶ ಮಾಡಿದಾಗ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ವೇಣೂರಿನ ಫಲ್ಗುಣಿ ನದಿ ತೀರದ ಉತ್ತಾರಭಿಮುಖವಾಗಿ ನಿಂತಿರುವ 35 ಅಡಿ ಎತ್ತರದ ಏಕಶಿಲಾ ರಚನೆಯ ಬಾಹುಬಲಿ ಮೂರ್ತಿ ಸದ್ಯ ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗಿದೆ. ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲ್ಪಟ್ಟ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ಈ ಕ್ಷೇತ್ರದ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತ ಬಂದಿದ್ದು, ಅವರಿಗೆ ಪಟ್ಟಭಿಷೇಕವಾದ ಬಳಿಕ ಇದು ತೃತೀಯ ಮಹಾಮಸ್ತಕಾಭಿಷೇಕವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Thu, 22 February 24