ಮಂಗಳೂರು: ಟಿಪ್ಪು ಸುಲ್ತಾನ್ ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದ ಡಿವೈಎಫ್ಐ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಅನುಮತಿ ಪಡೆಯದೇ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಕೆ ಹಿನ್ನೆಲೆ ಕಟೌಟ್ ತೆರವುಗೊಳಿಸುವಂತೆ ಡಿವೈಎಫ್ಐ ಸಂಘಟನೆಗೆ ಕೊಣಾಜೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದ್ರೆ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದು, ಟಿಪ್ಪು ಸುಲ್ತಾನ್ ಕಟೌಟ್ ತರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರು, (ಫೆಬ್ರವರಿ 19): ಜಿಲ್ಲೆಯ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಟಿಪ್ಪು ಸುಲ್ತಾನ್ (Tipu Sultan) ಕಟೌಟ್ ಕಟೌಟ್ ತೆರವುಗೊಳಿಸುವಂತೆ ಕೊಣಾಜೆ ಪೊಲೀಸರು ನೀಡಿರುವ ನೋಟಿಸ್ಗೆ ಡಿವೈಎಫ್ಐ(DYFI) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದು, ನಾವು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಪೊಲೀಸರು ನೀವು ಅನುಮತಿ ಪಡೆದಿಲ್ಲ ಎಂದು ಹೇಳುವ ಜೊತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತೆ ಎಂದು ಹೇಳಿದ್ದಾರೆ. ಇಲ್ಲಿ ಅನುಮತಿಯ ಪ್ರಶ್ನೆ ಅಲ್ಲ. ಟಿಪ್ಪು ಫೋಟೋ ಹಾಕಿದ್ದನ್ನು ಬಿಜೆಪಿ ವಿವಾದ ಮಾಡುತ್ತಿದೆ. ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಯತ್ನಿಸುತ್ತಿದೆ. ಅದಕ್ಕೆ ಹೆದರಿದ ಪೊಲೀಸ್ ಇಲಾಖೆ ನಮಗೆ ನೋಟಿಸ್ ನೀಡಿದೆ ಎಂದು ಹೇಳಿದ್ದಾರೆ.
ಪೊಲೀಸ್ ನೋಟಿಸ್ ಬಗ್ಗೆ ಇಂದು (ಫೆಬ್ರವರಿ 19) ಸುದ್ದಿಗಾರರೊಂದಿಗೆ ಮಾತನಾಡಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಟಿಪ್ಪು ಕಟೌಟ್ ಅನ್ನು ನಾವು ಯಾವುದೇ ಕಾರಣಕ್ಕೂ ತೆರವುಗೊಳಿಸುವ ಪ್ರಶ್ನೆಯಿಲ್ಲ. ಈಗಾಗಲೇ ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದಿದ್ದೇವೆ. ಟಿಪ್ಪು ಯಾವುದೇ ಕಾರಣಕ್ಕೂ ನಿಷೇಧಿತ, ವಿವಾದಾತ್ಮಕ ವ್ಯಕ್ತಿ ಅಲ್ಲ. ಬಿಜೆಪಿಗೆ ಟಿಪ್ಪು ಸುಲ್ತಾನ್ ಇಷ್ಟ ಇಲ್ಲ ಅಂದ್ರೆ ನಾವು ತೆರವುಗೊಳಿಸುವ ಪ್ರಶ್ನೆಯಿಲ್ಲ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹ ಟಿಪ್ಪು ಸುಲ್ತಾನ್ ಆಳ್ವಿಕೆ ಮಾಡಿದ್ದಾರೆ. ಈ ನೆಲದಲ್ಲಿ ನಿಂತು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಹೋರಾಟ ಮಾಡಿದ್ದಾರೆ. ರಾಣಿ ಅಬ್ಬಕ, ಟಿಪ್ಪು ಸುಲ್ತಾನ್ ಇಬ್ಬರನ್ನು ನಮ್ಮ ಸಮ್ಮೇಳನಕ್ಕೆ ಬಳಸಿಕೊಂಡಿದ್ದೇವೆ. ಇಬ್ಬರಿಗೂ ಸಹ ಬಹಳಷ್ಟು ಗೌರವ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಂಗಳೂರು: ಹರೇಕಳದಲ್ಲಿ ಹಾಕಿದ ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸರಿಂದ ನೋಟಿಸ್
ಬಿಜೆಪಿಯ ಕೆಳಮಟ್ಟದ ರಾಜಕಾರಣಕ್ಕೆ ನಾವು ತಲೆಬಾಗುವ ಪ್ರಶ್ನೆಯಿಲ್ಲ. ಪೊಲೀಸರಿಗೆ ಸರಿಯಾಗಿ ಮನವರಿಕೆ ಮಾಡಿದ್ದೇವೆ. ಟಿಪ್ಪು ಸುಲ್ತಾನ್ ಸಮ್ಮೇಳನದ ಕೊನೆವರೆಗೂ ರಾಣಿ ಅಬ್ಬಕ್ಕ, ಕೋಟಿ ಚೆನ್ನಯ, ನಾರಾಯಣ ಗುರು, ಶುಭಾಷ್ ಚಂದ್ರ ಬೋಸ್,ಭಗತ್ ಸಿಂಗ್ ಜೊತೆ ಇರುತ್ತಾರೆ. ಸಮ್ಮೇಳನದ ಫ್ಲೆಕ್ಸ್, ಪೋಸ್ಟರ್ ನಲ್ಲಿ ಇರುತ್ತಾರೆ ಎಂದು ಹೇಳಿದರು.
ಇದೇ ಫೆ.25ರಿಂದ ತೊಕ್ಕೊಟ್ಟಿನಲ್ಲಿ ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನ ನಡೆಯಲಿದೆ. ಹೀಗಾಗಿ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಫೆ.16 ರಂದು ಡಿವೈಎಫ್ಐ ಆರು ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಯಾವುದೇ ಅನುಮತಿ ಪಡೆಯದೇ ಅಳವಡಿಸಿರುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೂಡಲೇ ಕಟೌಟ್ ತೆರವು ಮಾಡುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದ್ರೆ, ಇದೀಗ ಇದಕ್ಕೆ ಡಿವೈಎಫ್ಐ ನಿರಾಕರಿಸಿದೆ.
ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಹಾಕಿರುವ ಧಾರ್ಮಿಕ ಗುರುತುಗಳನ್ನು ತೆರವುಗೊಳಿಸಲಾಗುತ್ತದೆ. ಇತ್ತೀಚೆಗೆ ಮಂಡ್ಯದಲ್ಲಿಹನುಮ ಧ್ವಜ ಹಾಗೂ ಬೆಂಗಳೂರಿನ ಶಿವಾಜಿನಗರದಲ್ಲ ಹಾಕಲಾಗಿದ್ದ ಹಸಿರು ಧ್ವಜಗಳನ್ನು ತೆರವುಗೊಳಿಸಲಾಗಿತ್ತು. ಮಂಡ್ಯದಲ್ಲಿ ಹನುಮ ಧ್ವಜ ತೆರವು ವಿಚಾರ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಇತರೆ ಕಡೆಗಳಲ್ಲಿ ಇರುವ ಕೇಸರಿ ಬಾವುಟಗಳನ್ನು ಕೂಡ ತೆರವುಗೊಳಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Mon, 19 February 24