ದೈವಗಳ ಹರಕೆ ಕೋಲ ನೆರವೇರಿಸಿದ ಯು ಟಿ ಖಾದರ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ರೋಶ
ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರು ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ನಡೆದ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲದಲ್ಲಿ ಭಾಗವಹಿಸಿದ್ದು ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಂಗಳೂರು, ಫೆ.05: ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ನಡೆದ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ (UT Khader) ಅವರು ಭಾಗವಹಿಸಿ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಆಶೀರ್ವಾದ ಪಡೆದರು. ದೈವಗಳ ಹರಕೆ ಕೋಲ (Kola) ನೆರವೇರಿಸಿದ ಯು.ಟಿ ಖಾದರ್ ವಿರುದ್ಧ ಮುಸ್ಲಿಂ ಮುಖಂಡನೋರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
‘ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗಿತ್ತೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ಪಡೆದು ತಲೆಗೆ ಮತ್ತಿಕೊಂಡು ನರಕಕ್ಕೆ ಹೋಗಲಿ. ಅದು ಆತನ ವೈಯಕ್ತಿಕ ಸ್ವತಂತ್ರ. ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಂವಿಧಾನಿಕ ಸ್ವಾತಂತ್ರ. ಅದನ್ನು ತಡೆಯುವ ಹಕ್ಕು ನನಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು, ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಉಡುಪಿ ಕೃಷ್ಣಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್
ನಾಗಾರಾಧನೆಗೆ ಕೇಳಿದ್ದಕ್ಕಿಂತ ಹೆಚ್ಚು ಜಮೀನು ದಾನ ಮಾಡಿದ್ದ ಯು.ಟಿ. ಖಾದರ್
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಜಮೀನು ಇದೆ. ಹಿಂದಿನ ಕಾಲದಲ್ಲಿ ಆ ಜಮೀನಿನ ಜಾಗದಲ್ಲಿ ನಾಗಾರಾಧನೆ ನಡೆಯುತ್ತಿತ್ತು. ಆ ಕಾಲದಲ್ಲಿ ಆ ಜಾಗ ಹಿಂದುಗಳಾದ ದಳವಾಯಿ ಕುಟುಂಬಕ್ಕೆ ಸೇರಿತ್ತು. ಭೂಮಸೂದೆ ಕಾನೂನಿನಲ್ಲಿ ಖಾದರ್ ಕುಟುಂಬದ ಹಿರಿಯರಿಗೆ ಆ ಜಮೀನು ಸಿಕ್ಕಿತು. ಪಾಲು ಮಾಡುವಾಗ ಅದು ಖಾದರ್ ಅವರ ಪಾಲಿಗೆ ಬಂದಿತ್ತು. ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಿನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆಗಳು ಕಾಡಲು ಶುರು ಮಾಡಿದವು. ಆಗ ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲಜಾಗದಲ್ಲಿ ಪೂಜೆ ನಡೆಯಬೇಕೆಂದು ಉತ್ತರ ಸಿಕ್ಕಿತ್ತು.
ಕೊನೆಗೆ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು. ಈ ವಿಷಯ ತಿಳಿದ ಖಾದರ್ ಅವರು 10 ಸೆಂಟ್ಸ್ ಗೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:31 pm, Mon, 5 February 24