ನಳಿನ್, ಡಿವಿ ಚಿತ್ರಕ್ಕೆ ಚಪ್ಪಲಿ ಹಾಕಿದ್ದವರಿಗೆ ಮನಸೋ ಇಚ್ಚೆ ಥಳಿತ: ಪುತ್ತೂರು ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್, ಪೇದೆ ಅಮಾನತು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀನಾಥ್ ರೆಡ್ಡಿ ಮತ್ತು ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್​ನನ್ನು ಅಮಾನತುಗೊಳಿಸಲಾಗಿದೆ.

ನಳಿನ್, ಡಿವಿ ಚಿತ್ರಕ್ಕೆ ಚಪ್ಪಲಿ ಹಾಕಿದ್ದವರಿಗೆ ಮನಸೋ ಇಚ್ಚೆ ಥಳಿತ: ಪುತ್ತೂರು ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್, ಪೇದೆ ಅಮಾನತು
ನಳಿನ್ ಕುಮಾರ್ ಕಟೀಲ್, ಡಿವಿ ಸದಾನಂದ ಗೌಡ ಚಿತ್ರಕ್ಕೆ ಚಪ್ಪಲಿ ಹಾರ
ಆಯೇಷಾ ಬಾನು

Updated on: May 18, 2023 | 2:00 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಸೇರಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಶ್ರೀನಾಥ್ ರೆಡ್ಡಿ ಮತ್ತು ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್​ನನ್ನು ಅಮಾನತುಗೊಳಿಸಲಾಗಿದೆ.

ದ.ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಅವರು ಘಟನೆ ಸಂಬಂಧ ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಪುತ್ತೂರು ಠಾಣೆಯ ಡಿವೈಎಸ್​ಪಿ, ಪುತ್ತೂರು ಗ್ರಾಮಾಂತರ ಪಿಎಸ್​ಐ, ಪೊಲೀಸ್ ಸಿಬ್ಬಂದಿ ಹರ್ಷಿತ್‌ ವಿರುದ್ಧ ಪ್ರಕರಣ ದಾಖಲಾಗಿದ್ದು ಬಂಟ್ವಾಳ ಡಿವೈಎಸ್​​ಪಿಗೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಲಾಗಿದೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದ ವಿಚಾರಣೆ ವರದಿ ಸಲ್ಲಿಕೆಯಾಗಿದೆ. ಆ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ PSI ಹಾಗೂ ಸಿಬ್ಬಂದಿ ಹರ್ಷಿತ್ ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದಾರೆ. ಪುತ್ತೂರು DySP ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮೇಲಾಧಿಕಾರಿಗೆ ವರದಿ ಸಲ್ಲಿಸಲು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ತಿಳಿಸಿದರು.

ಪುತ್ತೂರಿನಲ್ಲಿ ನಡೆದದ್ದೇನು?

ಮೇ 13ರಂದು ಹೊರಬಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಪುತ್ತೂರು ಬಸ್​ ನಿಲ್ದಾಣದ ಬಳಿ ರಾತ್ರೋರಾತ್ರಿ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿವಿ ಸದಾನಂದ ಗೌಡ ಅವರ ಭಾವಚಿತ್ರ ಇರುವ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿತ್ತು. ಆ ಬ್ಯಾನರ್​ಗೆ ಚಪ್ಪಲಿ ಹಾರ ಹಾಕಲಾಗಿತ್ತು. ಈ ಬಗ್ಗೆ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಹಾಗೂ ಇತರರು ಪೊಲೀಸರಿಗೆ ದೂರು ನೀಡಿದ್ದರು. ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ: ನಳಿನ್, ಡಿವಿ ಚಿತ್ರಕ್ಕೆ ಚಪ್ಪಲಿ ಹಾರ ಪ್ರಕರಣ; ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿದ ನಳಿನ್ ಕುಮಾರ್ ಕಟೀಲ್

ಆರೋಪಿಗಳ ಬಂಧಿಸಿ ಚಿತ್ರಹಿಂಸೆ ನೀಡಿದ ಪೊಲೀಸರು

ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದೆ. ಆರೋಪಿಗಳಿಗೆ ರಕ್ತ ಒಸರುವಷ್ಟು ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳು ಕೇಳಿ ಬಂದಿದ್ದವು. ನಂತರ ಹಿಂದೂ ಸಂಘಟನೆ ಮುಖಂಡ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲ ಆರೋಪಿಗಳನ್ನು ಬಿಡಿಸಿಕೊಂಡು ಬಂದಿದ್ದರು. ಅಚ್ಚರಿಯ ವಿಷಯವೆಂದರೆ, ಪೊಲೀಸರಿಂದ ಹಲ್ಲೆಗೊಳಗಾದ ಕಾರ್ಯಕರ್ತರ ಪೈಕಿ ಬಹುತೇಕರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕಾರ್ಯನಿರ್ವಹಿಸಿದ್ದವರೇ ಆಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ನಳಿನ್ ಕುಮಾರ್ ಕಟೀಲ್ ಮತ್ತು ಸದಾನಂದ ಗೌಡ ವಿರುದ್ಧ ಜನ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಕಾರ್ಯಕರ್ತರ ವಿರುದ್ಧವೇ ನಿರ್ಗಮಿತ ಶಾಸಕ ಸಂಜೀವ ಮಠಂದೂರು ಹಾಗೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ಹರಿದಾಡಿತ್ತು. ಇದಕ್ಕೂ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಸದ್ಯ ಈಗ ಇಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:37 pm, Thu, 18 May 23

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us