ಮಂಗಳೂರು: ಸೋರುತಿಹುದು ಜಿಲ್ಲಾಧಿಕಾರಿ ಕಚೇರಿ ಮಾಳಿಗಿ
ಮಂಗಳೂರಿನ ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ ಮತ್ತೊಂದೆಡೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯೂ ಸಂಕಷ್ಟಕ್ಕೀಡಾಗಿದೆ! ಮಂಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯ ಮೇಲ್ಛಾವಣಿಯಲ್ಲಿ ಮಳೆ ನೀರು ಸೋರುತ್ತಿದ್ದು, ಕಚೇರಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಮಂಗಳೂರು, ಜುಲೈ 27: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದೆಲ್ಲದರ ನಡುವೆ, ವಿವಿಧ ಕೆಲಸಗಳಿಗಾಗಿ ಪ್ರತಿನಿತ್ಯ ಸಾವಿರಾರು ಜನರು ತೆರಳುವ ಜಿಲ್ಲಾಧಿಕಾರಿ ಕಚೇರಿಯೂ ಸೋರುತ್ತಿದೆ! ಸೋರುತ್ತಿರುವ ಮಳೆ ನೀರಿನಿಂದ ಒದ್ದೆಯಾಗುವುದನ್ನು ತಪ್ಪಿಸಲು ಜನರು ಜಿಲ್ಲಾಧಿಕಾರಿ ಕಚೇರಿಯ ಒಳಾಂಗಣದಲ್ಲಿ ಛತ್ರಿಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
1994ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ನಿರ್ಮಿಸಲಾದ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣವು ಹೊರಗಿನಿಂದ ದೃಢವಾಗಿ ಕಾಣಿಸುತ್ತದೆ. ಆದರೆ, ಮೂರನೇ ಮಹಡಿಯ ಮೇಲ್ಛಾವಣಿ ಸೋರುವುದರಿಂದ ಮಳೆ ನೀರು ನೇರವಾಗಿ ಕೆಲವು ಕೊಠಡಿಗಳ ಒಳಗೆ ಬೀಳುತ್ತಿದೆ. ಪರಿಣಾಮವಾಗಿ ಪ್ರಮುಖ ಕಡತಗಳು ಹಾಳಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಛಾವಣಿ ಸೋರುತ್ತಿರುವುದರಿಂದ ಕಚೇರಿಯಲ್ಲಿರುವ ವಿಶೇಷ ಕಲಾಕೃತಿಗಳು ಹಾಳಾಗುತ್ತಿವೆ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ.
ನೂತನ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿ ವಿಳಂಬ
ನಗರದ ಪಡೀಲ್‌ನಲ್ಲಿ ನೂತನ ಡಿಸಿ ಕಚೇರಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆ ಜಾಗದ ಹೊಲದಲ್ಲಿ ನೀರು ನಿಂತಿದೆ. ಸಿಮೆಂಟ್ ತುಂಡುಗಳು ಸಾರ್ವಜನಿಕರ ಮೇಲೂ ಬೀಳುತ್ತಿವೆ.
ಇದನ್ನೂ ಓದಿ: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ
ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನರು ಡಿಸಿ ಕಚೇರಿಗೆ ಬರುತ್ತಾರೆ. ಡಿಸಿ ಸುದೀರ್ಘ ಸಭೆಗಳು ಮತ್ತು ಚರ್ಚೆಗಳನ್ನು ನಡೆಸುತ್ತಾರೆ. ಹೀಗಾಗಿ ಸಾರ್ವಜನಿಕರು ಕಾಯುವುದು ಅನಿವಾರ್ಯವಾಗುತ್ತದೆ. ಮಳೆಗಾಲದಲ್ಲಿ ಕಚೇರಿಗೆ ಬರುವವರ ಮೇಲೆ ನೇರವಾಗಿ ಮಳೆ ನೀರು ಬೀಳುತ್ತದೆ. ಕನಿಷ್ಠ ಮಳೆಗಾಲದಲ್ಲಾದರೂ ದುರಸ್ತಿ ಕಾರ್ಯ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯರೊಬ್ಬರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ