ಮಂಗಳೂರು: ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?

| Updated By: Ganapathi Sharma

Updated on: Jan 10, 2025 | 10:40 AM

ಮಂಗಳೂರಿನಲ್ಲೊಂದು ಅಪರೂಪದ ಅಪರಾಧ ಪ್ರಕರಣ ವರದಿಯಾಗಿದೆ. ಪೆಟ್ರೋಲ್​ ಬಂಕ್​ನಲ್ಲಿ ಸುಮಾರು 15 ವರ್ಷಗಳಿಂದ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ಮಾಲೀಕರ ವಿಶ್ವಾಸ ದುರುಪಯೋಗಪಡಿಸಿಕೊಂಡು ತನ್ನದೇ ಕ್ಯುಆರ್ ಕೋಡ್ ಇಟ್ಟು 2 ವರ್ಷಗಳಿಂದ ಸುಮಾರು 58 ಲಕ್ಷ ರೂ. ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ವಿವರಗಳಿಗೆ ಮುಂದೆ ಓದಿ.

ಮಂಗಳೂರು: ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?
ಮಂಗಳೂರಿನ ಬಂಗ್ರಕುಳೂರು ಬಳಿಯ ರಿಲಯನ್ಸ್​ ಔಟ್​ಲೆಟ್​ (ಒಳ ಚಿತ್ರದಲ್ಲಿ ಬಂಧಿತ ಆರೋಪಿ)
Follow us on

ಮಂಗಳೂರು, ಜನವರಿ 10: ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬ ತನ್ನದೇ ಕ್ಯುಆರ್​ ಕೋಡ್ ಅನ್ನು ಬಂಕ್​ನಲ್ಲಿರಿಸಿ ಮಾಲೀಕರಿಗೆ ವಂಚಿಸಿದ ಘಟನೆ ಮಂಗಳೂರಿನ ಬಂಗ್ರಕುಳೂರು ಎಂಬಲ್ಲಿ ನಡೆದಿದೆ. ಸಿಬ್ಬಂದಿ ಬರೋಬ್ಬರಿ 2 ವರ್ಷಗಳಿಂದ ಕೃತ್ಯ ಎಸಗುತ್ತಾ ಬಂದಿದ್ದು, ಕೊನೆಗೂ ಮಾಲೀಕರ ಅರಿವಿಗೆ ಬಂದಿದೆ. ಸದ್ಯ ಅವರು ನೀಡಿರುವ ದೂರಿನ ಮೇರೆಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಬಂಗ್ರಕುಳೂರು ಬಳಿಯ ರಿಲಯನ್ಸ್​ ಔಟ್​ಲೆಟ್​ನಲ್ಲಿ ಬಂಕ್​ನ ಸೂಪರ್​ ವೈಸರ್ 2 ವರ್ಷದಲ್ಲಿ ಬರೋಬ್ಬರಿ 58 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ. ಗ್ರಾಗಕರು ಪಾವತಿಗಾಗಿ ಬಳಸಲು ಬಂಕ್​ನಲ್ಲಿಟ್ಟಿದ್ದ ಕ್ಯುಆರ್​ ಕೋಡ್​ ಅನ್ನು ತೆರವು ಮಾಡಿದ್ದ ಆರೋಪಿ ತನ್ನದೇ ಕ್ಯುಆರ್​ ಕೋಡ್​ ಇಟ್ಟಿದ್ದ. ಪರಿಣಾಮವಾಗಿ ಗ್ರಾಹಕರು ಪಾವತಿ ಮಾಡಿದ ಹಣ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿತ್ತು.

ವಂಚನೆ ಎಸಗಿದ ಆರೋಪಿಯನ್ನು ಮಂಗಳೂರಿನ ಬಜ್ಪೆ ನಿವಾಸಿ ಮೋಹನದಾಸ್ ಎಂದು ಗುರುತಿಸಲಾಗಿದ್ದು, ಈತ ಸುಮಾರು 15 ವರ್ಷಗಳಿಂದ ಪೆಟ್ರೋಲ್​​ ​ಬಂಕ್​ನಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಬಂಕ್​ನ ಹಣಕಾಸು ವ್ಯವಹಾರ, ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಮೋಹನದಾಸ, 10-03-2020 ರಿಂದ 31-07-2022ರವರೆಗೆ ಕ್ಯುಆರ್ ಕೋಡ್ ಬದಲಿಸಿದ್ದ.

ಆರೋಪಿ ವಿರುದ್ಧ ರಿಲಯನ್ಸ್​​ ಕಂಪನಿ ಮ್ಯಾನೇಜರ್​ ಸಂತೋಷ್​​ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್​ ಕ್ರೈಂ ಮತ್ತು ಎಕನಾಮಿಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಆನ್‌ಲೈನ್ ಹೂಡಿಕೆ ಹಗರಣದಲ್ಲಿ 10.32 ಲಕ್ಷ ರೂ. ವಂಚನೆ

ಆನ್‌ಲೈನ್ ಹೂಡಿಕೆ ಹಗರಣದಲ್ಲಿ ಸುಮಾರು 10.32 ಲಕ್ಷ ರೂ. ವಂಚನೆ ಎಸಗಿದ ಪ್ರಕರಣ ಸಂಬಂಧ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದ ತ್ರಿಶೂರಿನ ನಿಧಿನ್ ಕುಮಾರ್ ಕೆಎಸ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಷೇರು ಮಾರುಕಟ್ಟೆಯ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯುವ ಭರವಸೆ ನೀಡಿ ದೂರುದಾರರಿಗೆ ವಂಚನೆ ಎಸಗಿದ್ದ.

ಇದನ್ನೂ ಓದಿ: ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ

ಆರೋಪಿಯು ಅನೇಕ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯು ಕಮಿಷನ್ ಆಧಾರದ ಮೇಲೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇತರ ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ