ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಸಂತ್ರಸ್ತನಿಗೆ ಎರಡು ಲಕ್ಷ ರೂ. ಪರಿಹಾರ ವಿತರಣೆ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗಿದೆ. ಪರಿಹಾರದ ಚೆಕ್ ಅನ್ನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಡಿಸಿ ಸಂತೋಷ್ ವಿತರಣೆ ಮಾಡಿದರು.
ಮಂಗಳೂರು, ಜನವರಿ 17: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತನಿಗೆ ರಾಜ್ಯ ಸರ್ಕಾರದ ವತಿಯಿಂದ ಬುಧವಾರ ಎರಡು ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಯಿತು. ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತರಾಗಿದ್ದ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಎಂಎಲ್ ಸಿ ಐವಾನ್ ಡಿಸೋಜಾ ಮನವಿ ಮಾಡಿದ್ದರು. ಅದರಂತೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗಿದೆ. ಪರಿಹಾರದ ಚೆಕ್ ಅನ್ನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಡಿಸಿ ಸಂತೋಷ್ ವಿತರಣೆ ಮಾಡಿದರು.
ಪುರುಷೋತ್ತಮ್ ಆಟೋ ಚಾಲಕರಾಗಿ ವೃತ್ತಿ ಜೀವನ ನಡೆಸುತ್ತಿದ್ದರು. ಒಮ್ಮೆ ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಡಿದುಕೊಂಡಿದ್ದ ಕುಕ್ಕರ್ ಸಿಡಿದು, ಆಟೋ ರಿಕ್ಷಾ ನಜ್ಜುಗುಜ್ಜಾಗಿತ್ತು. ಪುರುಷೋತ್ತಮ್ ಕೂಡ ತೀವ್ರ ಸ್ವರೂಪದ ಸುಟ್ಟ ಗಾಯಗಳಿಂದ ಬಳಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುತ್ತಾರೆ ಪರಿಹಾರ ಸಂಬಂಧಿತ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ವಿಶೇಷ ಪ್ರಕರಣ ಎಂದು ಪರಿಹಾರ ಮಂಜೂರು ಮಾಡಿ ಆದೇಶಿಸಲಾಗಿತ್ತು. ನವೆಂಬರ್ 19ರಂದು ಮಂಗಳೂರಿನ ನಾಗುರಿ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು.
2022 ರ ನವೆಂಬರ್ 19 ರಂದು ಮಂಗಳೂರಿನಲ್ಲಿ ರಿಕ್ಷಾದಲ್ಲಿ ಸ್ಫೋಟಗೊಂಡ ಕುಕ್ಕರ್ ಬಾಂಬ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಂಗಳೂರಿನಲ್ಲಿ 2020 ರಲ್ಲಿ ಬರೆಯಲ್ಪಟ್ಟಿದ್ದ ಭಯೋತ್ಪಾದನೆ ಸಂಬಂಧಿತ ಗೋಡೆ ಬರಹ ಪ್ರಕರಣದ ಆರೋಪಿಯಾಗಿದ್ದ ಮಹಮ್ಮದ್ ಶಾರೀಕ್ ತಂದ ಬಾಂಬ್ ಸ್ಫೋಟಗೊಂಡಿತ್ತು. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಆತ ಸಂಚು ಹೂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು. ಘಟನೆಯಲ್ಲಿ ಅಮಾಯಕ ರಿಕ್ಷಾ ಚಾಲಕ ಪುರುಷೋತ್ತಮ್ ಪೂಜಾರಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿತ್ತು. ಜತೆಗೆ ಅವರ ರಿಕ್ಷಾ ಕೂಡ ಜಖಂಗೊಂಡಿತ್ತು.
ಇದನ್ನೂ ಓದಿ: ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಟೋ ಚಾಲಕ ಪುರಷೋತ್ತಮ ಮನೆ ನವೀಕರಿಸಿ ಯುಗಾದಿ ಗಿಫ್ಟ್ ನೀಡಿದ ಟ್ರಸ್ಟ್
ಈ ಮಧ್ಯೆ, ಬೆಳದಿಂಗಳು ಫೌಂಡೇಶನ್ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿಗೊಳಿಸಿದ ನವೀಕೃತ ಮನೆಯನ್ನು ಪುರುಷೋತ್ತಮ್ ಅವರಿಗೆ ಕಳೆದ ವರ್ಷ ಮಾರ್ಚ್ನಲ್ಲೇ ಹಸ್ತಾಂತರಿಸಿತ್ತು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Wed, 17 January 24