ಮಂಗಳೂರು ತಾಲೂಕು ಕಚೇರಿಗೆ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬಟ್ಟಂಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಮಂಗಳೂರು ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ರೆಕಾರ್ಡ್ ರೂಮ್ನಲ್ಲಿ ದಾಖಲೆ ಡಿಜಿಟಲೀಕರಣದ ಬಗ್ಗೆ ಮಾಹಿತಿ ಪಡೆದು ಡಿಜಿಟಲೀಕರಣ ಆಗದ ದಾಖಲೆಗಳ ಶೀಘ್ರ ಡಿಜಿಟಲೀಕರಣಕ್ಕೆ ಸೂಚನೆ ನೀಡಿದರು.
ಮಂಗಳೂರು, ಆಗಸ್ಟ್ 29: ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ಅವರು ಮಂಗಳೂರು (Mangaluru) ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು. ಸಾರ್ವಜನಿಕರ ದೂರು ಹಿನ್ನೆಲೆ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಕೃಷ್ಣ ಭೈರೇಗೌಡ, ರೆಕಾರ್ಡ್ ರೂಮ್, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೆ ಕಚೇರಿ ಪರಿಶೀಲನೆ ನಡೆಸಿದರು.
ರೆಕಾರ್ಡ್ ರೂಮ್ನಲ್ಲಿ ದಾಖಲೆ ಡಿಜಿಟಲೀಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕಂದಾಯ ಸಚಿವರು, ಡಿಜಿಟಲೀಕರಣ ಆಗದ ದಾಖಲೆಗಳ ಶೀಘ್ರ ಡಿಜಿಟಲೀಕರಣಕ್ಕೆ ಸೂಚನೆ ನೀಡಿದರು. ಬಳಿಕ ಭೂಮಾಪನ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದ ಸಚಿವರು, ನೋಂದಣಿ ವಿಳಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಚೇರಿ ಸಿಬ್ಬಂದಿ ಪ್ರತಿ ಬಾರಿ ಸರ್ವರ್ ಡೌನ್ ಇದೆ ಎಂದು ಸಾರ್ವಜನಿಕರಗೆ ಹೇಳುತ್ತಿದ್ದರು. ಹೀಗಾಗಿ ಸ್ವತಃ ಕಚೇರಿಗೆ ಭೇಟಿ ನೀಡಿದ ಕೃಷ್ಣ ಭೈರೇಗೌಡ ಅವರು ಮಾಹಿತಿ ಪಡೆದರು. ಅಲ್ಲದೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇದ್ಯಾ ಅಂತ ಪ್ರಶ್ನಿಸಿದ್ದು, ನಮ್ಮಲ್ಲಿ ಯಾವುದೇ ಸರ್ವರ್ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನಹರಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಸಚಿವರು ಸೂಚನೆ ನೀಡಿದರು. ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇಲ್ಲ, ನಿಮ್ಮ ಸಮಸ್ಯೆಯನ್ನು ಸರಿಪಡಿಸಿ. ಅಪ್ಲೋಡ್ ಮಾಡುವಾಗ ಸಮಸ್ಯೆ ಇದ್ದರೆ ಜನರಿಗೆ ಮನವರಿಕೆ ಮಾಡಿ ಎಂದರು. ನಂತರ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದರು.
ಬಟ್ಟಂಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಕೃಷ್ಣ ಭೈರೇಗೌಡ ಭೇಟಿ
ಜಿಲ್ಲೆಯ ಉಳ್ಳಾಲ ತಾಲೂಕಿನ ಬಟ್ಟಂಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಕೃಷ್ಣ ಭೈರೇಗೌಡ, ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಚಿವರಿಗೆ ಮಾಹಿತಿ ನೀಡಿದರು. ಬಳಿಕ ಸೋಮೇಶ್ವರ ಪುರಸಭೆಗೆ ಕಂದಾಯ ಸಚಿವರು ಭೇಟಿ ನೀಡಿ ಗ್ರಾಮ ಲೆಕ್ಕಾಧಿಕಾರಿ ಲಾವಣ್ಯ ಅವರಿಂದ ಸಮಗ್ರ ಮಾಹಿತಿ ಪಡೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ