ನಮಗೆ ಸ್ವಲ್ಪ ವಿಷ ಕೊಡಿ: ದಿನೇಶ್ ಗುಂಡೂರಾವ್ ಬಳಿ ಮಂಗಳೂರಿನ ಅದ್ಯಪಾಡಿ ಗ್ರಾಮಸ್ಥರ ಆಕ್ರೋಶ

| Updated By: Ganapathi Sharma

Updated on: Aug 02, 2024 | 10:10 AM

ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದರು. ಇದೇ ವೇಳೆ ಮಂಗಳೂರಿನ ಅದ್ಯಪಾಡಿ ಗ್ರಾಮಸ್ಥರು ಸಚಿವರ ಬಳಿ ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಗ್ಗೆ ಜನರಿಂದ, ಸಚಿವರಿಂದ ಮೆಚ್ಚುಗೆಯ ಮಾತುಗಳು ವ್ಯಕ್ತವಾದವು.

ನಮಗೆ ಸ್ವಲ್ಪ ವಿಷ ಕೊಡಿ: ದಿನೇಶ್ ಗುಂಡೂರಾವ್ ಬಳಿ ಮಂಗಳೂರಿನ ಅದ್ಯಪಾಡಿ ಗ್ರಾಮಸ್ಥರ ಆಕ್ರೋಶ
ಮಂಗಳೂರಿನ ಪ್ರವಾಹಪೀಡಿತ ಪ್ರದೇಶಗಳಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
Follow us on

ಮಂಗಳೂರು, ಆಗಸ್ಟ್ 2: ಫಲ್ಗುಣಿ ನದಿಯಲ್ಲಿ ನೆರೆ ಬಂದು ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ ಮಂಗಳೂರಿನ ಅದ್ಯಪಾಡಿ ಗ್ರಾಮ ದ್ವೀಪದಂತಾಗಿದೆ. ಮಳೆಗಾಲ ಬಂದಾಗ ಸಂಪೂರ್ಣ ಮುಳುಗಡೆಯಾಗುವ ಅದ್ಯಪಾಡಿಯ ಮೋಗೆರ್ ಕುದ್ರುವಿಗೆ ಶುಕ್ರವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಇದೇ ವೇಳೆ, ಉಸ್ತುವಾರಿ ಸಚಿವರ ಮುಂದೆ ಮೊಗೇರ್ ಕುದ್ರುವಿನ ಜನ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಮಳೆಗಾಲದ ಸಂದರ್ಭ ಇದೇ ರೀತಿ ಸಮಸ್ಯೆ ಆಗುತ್ತದೆ. ನಮಗೆ ಇದಕ್ಕಿಂತ ಸ್ವಲ್ಪ ವಿಷ ಆದರೂ ಕೊಡಿ ಎಂದು ಸಚಿವರ ಬಳಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮರವೂರು ಕಿಂಡಿ‌ ಅಣೆಕಟ್ಟಿಗೆ ಎಮರ್ಜೆನ್ಸಿ ಗೇಟ್ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ. 11 ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ‌ಕ್ರಮ ಆಗಿಲ್ಲ. ಈ ಮಳೆಗಾಲದಲ್ಲಿ ಮೂರು ಬಾರಿ ನಮ್ಮ ಮನೆಗಳು ಮುಳುಗಡೆ ಆದವು. ಪ್ರತಿ‌ ಸಾರಿ ನೀವು ಬಂದು ಹೋಗುವುದು ಮಾತ್ರ ನಡೆಯುತ್ತಿದೆ. ನಮಗೆ ನೀವು ನೀಡುವ ಪರಿಹಾರದ ಹಣ ಬೇಡ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ನಮ್ಮ ಕೃಷಿ ಭೂಮಿಗೆ‌ ಹಾನಿ ಆಗಿದೆ. ಮನೆಯೆಲ್ಲಾ ಮುಳುಗಡೆ ಆಗಿದೆ. ನೀವೆಲ್ಲಾ ಒಂದೆರಡು ದಿನ ಇಲ್ಲಿ ಬಂದು ನಿಲ್ಲಿ. ಆಗ ನಿಮಗೆ ಸಮಸ್ಯೆ ಅರ್ಥ ಆಗುತ್ತದೆ ಎಂದು ಜನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಲ್ಲೈ ಮುಗಿಲನ್​ಗೆ ಶಹಬ್ಬಾಸ್ ಎಂದ ಜನ

ಉಸ್ತುವಾರಿ ಸಚಿವರ ಮುಂದೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್​ಗೆ ಮೊಗೇರ್ ಕುದ್ರು ಜನರು ಶಹಬ್ಬಾಸ್​​​ಗಿರಿ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಯವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಡಿ. ಅವರು ಬಹಳ ಒಳ್ಳೆಯ ಅಧಿಕಾರಿ. ಜಿಲ್ಲಾಧಿಕಾರಿಗೆ ನಮ್ಮ ನೋವು ಕೇಳಿಸಿಕೊಳ್ಳುವ ತಾಳ್ಮೆ ಇದೆ ಎಂದು ಜನ ಮೆಚ್ಚುಗೆಯ ಮಾತುಗಳನ್ನಾಡಿದರು.

ಇದನ್ನೂ ಓದಿ: ಕಡಲ್ಕೊರೆತದಿಂದ ಮಂಗಳೂರು, ಉಡುಪಿಗೆ ಕಾದಿದೆ ಗಂಡಾಂತರ: 2040ಕ್ಕೆ ಶೇ 5ರಷ್ಟು ಭೂಮಿ ಸಮುದ್ರಪಾಲು

ಇದಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಜಿಲ್ಲಾಧಿಕಾರಿಯವರು ಮುಂದೆ ಬಡ್ತಿ ಪಡೆಯುತ್ತಾರೆ. ಅವರು ಬಹಳ ಒಳ್ಳೆಯ ಅಧಿಕಾರಿ, ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ