ಕೊನೆಗೂ ಕೇರಳ ಪ್ರವೇಶಿಸಿದ ಮುಂಗಾರು: ಇನ್ನೆರಡು ದಿನಗಳಲ್ಲಿ ಕರಾವಳಿಗೆ ಮಾನ್ಸೂನ್ ಆಗಮನ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹೈ ಅಲರ್ಟ್
Monsoon Rain: ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಈ ಬಗ್ಗೆ ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಇನ್ನೆರಡು ದಿನಗಳಲ್ಲಿ ದಕ್ಷಿಣ ಕನ್ನಡದಲ್ಲೂ ಮುಂಗಾರು ಮಳೆ ಬರಲಿದೆ. ಪ್ರವಾಹ ಹಾಗೂ ಭೂಕುಸಿತ ತಡೆಗೆ ಜಿಲ್ಲಾಡಳಿತ 3.25 ಕೋಟಿ ರೂ. ಮೀಸಲಿಟ್ಟು, 115 ಕಾಳಜಿ ಕೇಂದ್ರ ಹಾಗೂ 24*7 ಕಂಟ್ರೋಲ್ ರೂಂ ತೆರೆದಿದೆ.

ಮಂಗಳೂರು, ಜೂನ್ 4: ಕೊನೆಗೂ ಮುಂಗಾರು (Monsoon) ಮಾರುತಗಳು ಕೇರಳ ಪ್ರವೇಶಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಮುಂಗಾರು ಮಳೆ ಆಗಮನವಾಗುವ ನಿರೀಕ್ಷೆ ಇದೆ. ಮಳೆಗಾಲದ ಆರಂಭದ ಬೆನ್ನಲ್ಲೇ ಕರಾವಳಿಯಲ್ಲಿ ಸಂಭವಿಸಬಹುದಾದ ನೆರೆ, ಪ್ರವಾಹ ಹಾಗೂ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದೆ.
ಮುಖ್ಯಾಂಶಗಳು
- ತುರ್ತು ಸಂದರ್ಭಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಆರಂಭ.
- ಜಿಲ್ಲೆಯಾದ್ಯಂತ 115 ಕಾಳಜಿ ಕೇಂದ್ರಗಳ ಸ್ಥಾಪನೆ.
- ತುರ್ತು ಪರಿಹಾರ, ರಕ್ಷಣಾ ಕಾರ್ಯಾಚರಣೆಗಾಗಿ 3.25 ಕೋಟಿ ರೂ. ಅನುದಾನ ಮೀಸಲು.
ಅಧಿಕಾರಿಗಳಿಗೆ ಜವಾಬ್ದಾರಿ, ಕಂಟ್ರೋಲ್ ರೂಂ ಸ್ಥಾಪನೆ
ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅವಾಂತರಗಳು ಮತ್ತು ಪ್ರಾಣಹಾನಿಯ ಆತಂಕವನ್ನು ತಪ್ಪಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ನೇತೃತ್ವದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು (Control Room) ತೆರೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಪ್ರತ್ಯೇಕ ಇಂಜಿನಿಯರ್‌ಗಳನ್ನು, 223 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳನ್ನು (PDO) ಹಾಗೂ 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ‘ಇನ್ಸಿಡೆಂಟ್ ಕಮಾಂಡರ್’ಗಳಾಗಿ ನೇಮಕ ಮಾಡಲಾಗಿದ್ದು, ಇವರು ಜಿಲ್ಲಾಧಿಕಾರಿ ಕಚೇರಿಯ ಸಂಪರ್ಕದಲ್ಲಿರಲಿದ್ದಾರೆ.
ಎನ್‌ಡಿಆರ್‌ಎಫ್ ನಿಯೋಜನೆ, ಪ್ರವಾಸಿಗರಿಗೆ ನಿರ್ಬಂಧ
ಮುಂಜಾಗ್ರತಾ ಕ್ರಮವಾಗಿ 25 ಸಿಬ್ಬಂದಿ ಒಳಗೊಂಡ ಎನ್‌ಡಿಆರ್‌ಎಫ್ (NDRF) ತಂಡವನ್ನು ಪುತ್ತೂರು ತಾಲ್ಲೂಕಿನಲ್ಲಿ ಹಾಗೂ 10 ಸಿಬ್ಬಂದಿಯ ಮತ್ತೊಂದು ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 92 ಪ್ರವಾಹ ಪೀಡಿತ ಪ್ರದೇಶಗಳು ಹಾಗೂ 88 ಸಂಭವನೀಯ ಭೂಕುಸಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಗುಡ್ಡಗಾಡು ಪ್ರದೇಶಗಳಲ್ಲಿ ಚಾರಣ (ಟ್ರೆಕ್ಕಿಂಗ್) ಮಾಡುವುದನ್ನು, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಇಳಿಯುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಕರಾವಳಿ-ಮಲೆನಾಡಿಗೆ ಮಳೆ ಸಿಂಚನ, ಉತ್ತರ ಕರ್ನಾಟಕಕ್ಕೆ ಸೂರ್ಯನ ತಾಪ!
ಅಲ್ಲದೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೂ ಯಾವುದೇ ರೀತಿಯ ರಸ್ತೆ ಕಾಮಗಾರಿ, ಗುಡ್ಡ ಅಗೆಯುವುದು ಅಥವಾ ಮಣ್ಣು ಅಗೆಯುವ ಕೆಲಸಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಡಳಿತ ವತಿಯಿಂದ ಮುಂಗಾರು ಎದುರಿಸಲು ಭರ್ಜರಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




